ರಾಜ್ಯ

ಕಲಬುರಗಿ: ಹತ್ತಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುವ ವೇಳೆ ರೈತ ಸಾವು

Shilpa D

ಕಲಬುರಗಿ: ಹತ್ತಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುವ ವೇಳೆ ಕೀಟನಾಶಕ ತಗುಲಿ ಯುವ ರೈತನೋರ್ವ ಮೃತಪಟ್ಟ ಘಟನೆ ಸೋಮವಾರ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ತರ್ಕಸ್ ಪೇಟೆ ಗ್ರಾಮದಲ್ಲಿ ವರದಿಯಾಗಿದೆ.

ಅಂಬ್ರೇಶ ಮೇಲಪ್ಪನೋರ (26) ಮೃತ ರೈತ ಎಂದು ತಿಳಿದು ಬಂದಿದೆ. ಗ್ರಾಮದಲ್ಲಿರುವ ತನ್ನ 3 ಎಕರೆ ಜಮೀನಿನಲ್ಲಿ ಬೆಳೆಯಲಾದ ಹತ್ತಿ ಬೆಳೆಗೆ ಕ್ರಿಮಿನಾಶಕ ತೈಲ ಸಿಂಪಡಣೆ ಮಾಡುತಿದ್ದರು.

ವಿಷಕಾರಿ ತೈಲ ಉಸಿರಾಟದ ಮೂಲಕ ದೇಹ ಸೇರಿ ರೈತ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಕೊಲ್ಲೂರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಅರೊಗ್ಯದಲ್ಲಿ ಚೇತರಿಕೆ ಕಾಣದ ಕಾರಣ ಮತ್ತೆ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವರ್ಷವಷ್ಟೇ ವಿವಾಹವಾಗಿತ್ತು.  ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖಂಡ ಭೀಮರೆಡ್ಡಿಗೌಡ ಕುರಾಳ ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಶಿಫಾರಸು ಮಾಡದ ಹಾಗೂ ಅತಿಹೆಚ್ಚಿನ ರಾಸಾಯನಿಕ ಅಂಶಗಳು ಇರುವ ಕೀಟನಾಶಕಗಳನ್ನು ಎಲ್ಲೆಡೆ ಮಾರಾಟ ಮಾಡಲಾಗುತ್ತಿದೆ. ಇವುಗಳ ಬಳಕೆಯಿಂದ ರೈತರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಅನಧಿಕೃತ ಕೀಟನಾಶಕ ಪೂರೈಕೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ತರಕಸ್ಪೇಟ್ ಗ್ರಾಮದ ಮುಖಂಡ ನಂದಾರೆಡ್ಡಿ ಒತ್ತಾಯಿಸಿದ್ದಾರೆ.

SCROLL FOR NEXT