ರಾಜ್ಯ

ಹಾಲಶ್ರೀ ಸ್ವಾಮಿಯ ಮತ್ತೊಂದು ದೋಖಾ: ಶಿರಹಟ್ಟಿ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಪಿಡಿಒಗೆ ಕೋಟಿ ರು. ವಂಚನೆ

Shilpa D

ಬೆಂಗಳೂರು: ಹಿರೇಹಡಗಲಿ ಮಠದ ಶ್ರೀ ಅಭಿನವ ಹಾಲಶ್ರೀ ಸ್ವಾಮೀಜಿ  ಇನ್ನೊಂದು ದೋಖಾ ಮಾಡಿದ ಮಾಹಿತಿ ಬಯಲಾಗಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಒಬ್ಬರಿಂದ 1 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯ್ತಿ ಪಿಡಿಒ ಆಗಿದ್ದ ಸಂಜಯ್‌ ಚಡವಾಳ ವಂಚನೆಗೊಳಗಾದವರು. ಟಿಕೆಟ್ ಕೊಡಿಸಲು ಒಂದು ಕೋಟಿ ರೂ.ಗೆ ಡೀಲ್‌ ಆಗಿತ್ತು. ಸಂಜಯ್‌ ಒಂದು ಕೋಟಿ ರೂ. ಹಣವನ್ನು ಹಾಲಶ್ರೀ ಅವರಿಗೆ ನೀಡಿದ್ದರು ಎನ್ನಲಾಗಿದೆ.

ಆದರೆ, ಶಿರಹಟ್ಟಿ ಟಿಕೆಟ್‌ ಕೊಡಿಸುವಲ್ಲಿ ಹಾಲಶ್ರೀ ವಿಫಲರಾಗಿದ್ದರು. ಅದಾದ ಬಳಿಕ ಸಂಜಯ್‌ ತನ್ನ ಹಣ ವಾಪಸ್‌ ಕೊಡಬೇಕು ಎಂದು ಹಾಲಶ್ರೀ ಬೆನ್ನು ಬಿದ್ದಿದ್ದರು. ಆದರೆ, ಹಾಲಶ್ರೀ ದಿನ ದೂಡುತ್ತಲೇ ಇದ್ದರು. ಈ ನಡುವೆ, ಗೋವಿಂದ ಪೂಜಾರಿ ಪ್ರಕರಣ  ಬೆಳಕಿಗೆ ಬಂತು. ಸೆಪ್ಟೆಂಬರ್‌ 8ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಹಾಲಶ್ರೀ ತಮ್ಮ ಇನ್ನಷ್ಟು ಅಕ್ರಮಗಳು ಬಯಲಿಗೆ ಬರುವುದು ಬೇಡ ಎಂದು ಸಂಜಯ್‌ ಅವರಿಗೆ ಕರೆ ಮಾಡಿ ಹಣ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರು.

ಸಂಜಯ್‌ ಅವರು ಒಂದೆರಡು ದಿನ ಬಿಟ್ಟು ಹಣಕ್ಕಾಗಿ ಮಠಕ್ಕೆ ತೆರಳಿದರೆ ಅಷ್ಟು ಹೊತ್ತಿಗೆ ಹಾಲಶ್ರೀ ಮಠದಿಂದಲೇ ನಾಪತ್ತೆಯಾಗಿದ್ದರು. ಈ ವೇಳೆ ಸಂಜಯ್‌ ಅವರು ಹಾಲಶ್ರೀ ಚಾಲಕನ ಸಂಪರ್ಕ ಮಾಡಿದ್ದರು ಆಗ ಚಾಲಕ ಹಿರೇಹಡಗಲಿ‌ ಮಠದಿಂದ ಮೈಸೂರಿನತ್ತ ತೆರಳಿ ಆಗಿತ್ತು.

ಈ ನಡುವೆ, ಹಾಲಶ್ರೀ ಕಾರು ಚಾಲಕ ಸಿಸಿಬಿ ಬಲೆಗೆ ಬಿದ್ದಿದ್ದ. ಈ ನಡುವೆ ಕಾರು ಚಾಲಕ ಮತ್ತು ಪಿಡಿಒ ಸಂಜಯ್‌ ನಡೆದಿರುವ ಮಾತುಕತೆ, ಫೋನ್‌ ಕಾಲ್‌ ಬೆನ್ನು ಹತ್ತಿ ಪಿಡಿಒ ಸಂಜಯ್‌ನನ್ನು ವಿಚಾರಣೆ ನಡೆಸಿದ್ದರು. ಆಗ ಹಾಲಶ್ರೀಯ ಇನ್ನೊಂದು ಹಗರಣ ಬೆಳಕಿಗೆ ಬಂದಿದೆ. ಸಿಸಿಬಿ ವಿಚಾರಣೆಯ ಬಳಿಕ ಸಂಜಯ್‌ ಈಗ ಮುಂಡರಗಿ ಠಾಣೆಗೆ ದೂರು ನೀಡಿದ್ದಾರೆ.

ಸಂಜಯ್ ಚವಡಾಳ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರು. ಎಸ್ ಸಿ (ಮಾದಿಗ) ಸಮುದಾಯಕ್ಕೆ ಸೇರಿದವರು. ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿಹೊಂದಿದ್ದ ಸಂಜಯ್ ಅರುಂಧತಿ ಫೌಂಡೇಷನ್ ಹೆಸರಲ್ಲಿ ಸಾಮಾಜಿಕ‌ ಸೇವೆ ಮಾಡುತ್ತಿದ್ದರು. ಸೆಪ್ಟೆಂಬರ್ 19 ನೇ ತಾರೀಖು ಮಧ್ಯರಾತ್ರಿ ಠಾಣೆ ಬಂದು ಸಂಜಯ್‌ ದೂರು ನೀಡಿದ್ದು ಅದರಲ್ಲಿ ಚುನಾವಣೆ ಮುಂಚಿತವಾಗಿ 1 ಕೋಟಿ ರೂಪಾಯಿ ಹಣವನ್ನು ಶ್ರೀಗಳಿಗೆ ನೀಡಿದ್ದಾಗಿ ಹೇಳಿದ್ದಾರೆ.

SCROLL FOR NEXT