ರಾಜ್ಯ

ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಸಿಬ್ಬಂದಿ ಮೇಲೆ ಹಲ್ಲೆ, ಬ್ಯಾಲೆಟ್‌ ಪೇಪರ್‌ ದೋಚಿದ ದುಷ್ಕರ್ಮಿಗಳು!

Nagaraja AB

ರಾಮನಗರ: ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಸಲು ತೆರಳುತ್ತಿದ್ದ ಚುನಾವಣಾಧಿಕಾರಿಗಳ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಮತಯಂತ್ರಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಬುಧವಾರ ನಡೆದಿದೆ. ಅವರನ್ನು ತಡೆಯಲು ಯತ್ನಿಸಿದ ಮಹಿಳಾ ಸಿಬ್ಬಂದಿ ಮೇಲೆಯೂ ದುಷ್ಕರ್ಮಿಗಳು ಕಾರನ್ನು ಚಲಾಯಿಸಲು ಯತ್ನಿಸಿದ್ದಾರೆ.

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆಸಲು  ಹುಲ್ಲೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಿಬ್ಬಂದಿಗಳಾದ ಉಮೇಶ್ ಮತ್ತು ಉಷಾ ಅವರ ಕಾರನ್ನು ಮಾಗಡಿ- ಕುಣಿಗಲ್ ರಸ್ತೆಯ ಕೆಂಚನಹಳ್ಳಿ ಬಳಿ  ಅಡಗಟ್ಟಿದ್ದ ಗ್ಯಾಂಗ್, ಗುರುತಿನ ಚೀಟಿಯನ್ನು ಕೇಳಿ ಚುನಾವಣಾ ಸಿಬ್ಬಂದಿ ಎಂದು ದೃಢಪಡಿಸಿಕೊಂಡ ನಂತರ ಬ್ಯಾಲೆಟ್‌ ಪೇಪರ್‌, ರಬ್ಬರ್ ಸ್ಟ್ಯಾಂಪ್‌ಗಳು, ಚುನಾವಣೆಗೆ ಸಂಬಂಧಿಸಿದ ಇತರ ಸಾಮಗ್ರಿಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಹೊಂದಿದ್ದ ಬ್ಯಾಗ್ ದೋಚಿ ಪರಾರಿಯಾಗಿದೆ. 

ಸಿಬ್ಬಂದಿ ತಡೆಯಲು ಯತ್ನಿಸಿದರಾದರೂ ಆರೋಪಿಗಳು ಕಾರು ಹತ್ತಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಪೈಪೋಟಿಯೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ನಂತರ ಚುನಾವಣೆಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

SCROLL FOR NEXT