ರಾಜ್ಯ

ಆಶ್ರಯ ಯೋಜನೆ ಮನೆ ಖಾಲಿ ಮಾಡುವಂತೆ ಅರವಿಂದ್ ಬೆಲ್ಲದ್ ಬೆಂಬಲಿಗರಿಂದ ಕಿರುಕುಳ: ಆರೋಪಕ್ಕೆ ಶಾಸಕರ ಸ್ಪಷ್ಟನೆ !

Shilpa D

ಧಾರವಾಡ: ಆಶ್ರಯ ಯೋಜನೆಯಡಿ ಮಂಜೂರಾಗಿರುವ ಮನೆಗಳನ್ನು ಖಾಲಿ ಮಾಡುವಂತೆ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಬೆಂಬಲಿಗರು ಕಿರುಕುಳ ನೀಡುತ್ತಿದ್ದಾರೆ ಎಂದು ಇತ್ತೀಚೆಗೆ ರಾಜ್ಯ ಸರ್ಕಾರ ನಡೆಸಿದ ಜನತಾ ದರ್ಶನದ ವೇಳೆ ಜನರು ಆರೋಪಿಸಿದ್ದಾರೆ.

ಸುಮಾರು 100 ಮಂದಿ ಕಾರ್ಮಿಕರು  ಧಾರವಾಡ ಜಿಲ್ಲಾ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ.  ಆಶ್ರಯ ಯೋಜನೆಯಡಿ ಮನೆಗಳ ಹಂಚಿಕೆ ಪಾರದರ್ಶಕತೆಯ ಕೊರತೆಯಿಂದ ತಪ್ಪು ಕಾರಣಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿದೆ. ಸರಕಾರದ ಬಹುತೇಕ ಯೋಜನೆಗಳು ಸಮಾಜದ ದುರ್ಬಲ ವರ್ಗದ ಹಾಗೂ ದನಿ ಇಲ್ಲದ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.

ತನ್ನ ಕುಟುಂಬಕ್ಕೆ ತ್ರಿಹಾಲ್ ಪ್ರದೇಶದಲ್ಲಿ ಮನೆ ಮಂಜೂರು ಮಾಡಲಾಗಿದೆ, ಆದರೆ ಬೆಲ್ಲದ್ ಅವರ ಅನುಯಾಯಿಗಳು ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ನಿವಾಸಿ ಮಜುಲಾ ಕಾಂತೇಶ್ವರಿ ಆರೋಪಿಸಿದ್ದಾರೆ. ಪೊಲೀಸರು ಕೂಡ ಇಂತಹ ಬೆಳವಣಿಗೆಗಳಿಗೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ನಾವು ಬಡವರು ಮತ್ತು ನಮ್ಮ ತಲೆಯ ಮೇಲೆ ಯಾವುದೇ ಆಶ್ರಯವಿಲ್ಲ. ಕುಟುಂಬದವರು ಮನೆಯಿಂದ ಹೊರಗೆ ಹೋದಾಗ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ನಮ್ಮ ವಿರುದ್ಧ ಸುಳ್ಳು ಕೇಸು ಹಾಕಿ ನಮ್ಮನ್ನು ಹೊರಹಾಕಲು ಯತ್ನಿಸುತ್ತಾರೆ. ನಾವು ತೊಂದರೆಯಲ್ಲಿದ್ದು ನಮಗೆ ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮತ್ತು ಕೆಲವು ರಾಜಕೀಯ ಮುಖಂಡರ ಅನುಯಾಯಿಗಳು ಕಾನೂನು ಅಥವಾ ಪೊಲೀಸರ ಭಯವಿಲ್ಲದೆ ಇಂತಹ ಅಕ್ರಮ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೆಲವೊಮ್ಮೆ ಕೆಲವು ಅಧಿಕಾರಿಗಳು ಇಂತಹ ಕಿಡಿಗೇಡಿಗಳ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಮತ್ತೊಬ್ಬ ನಿವಾಸಿ ದೂರಿದ್ದಾರೆ.

ಕಾಲೋನಿಗಳಲ್ಲಿ ರಾಜಕೀಯ ಗೂಂಡಾಗಳ ವಿರುದ್ಧ ನಮಗೆ ಪೊಲೀಸ್ ಭದ್ರತೆಯ ಅಗತ್ಯವಿದೆ. ಹೊರಗೆ ಎಸೆಯಲ್ಪಡುವ ಭಯದಿಂದ ನಾವು ಬಾಗಿಲನ್ನು ಲಾಕ್ ಮಾಡಿಕೊಳ್ಳುತ್ತಿದ್ದು ಮನೆಯಿಂದ  ಹೊರಬರಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವಲತ್ತುಕೊಂಡಿದ್ದಾರೆ.

ಇಂತಹ ಆರೋಪಗಳು ಸಾಮಾನ್ಯ ಎಂದು ಶಾಸಕ ಅರವಿಂದ್ ಬೆಲ್ಲದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಕೆಲವರು ಸರಕಾರದ ಯೋಜನೆಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ನಿಜ. ಆದರೆ, ಶಾಸಕನಾದ ನನಗೆ ಯಾರನ್ನೂ ಮನೆಯಿಂದ ಹೊರಗೆ ಕಳುಹಿಸುವ ಅಧಿಕಾರವಿಲ್ಲ.ಅಧಿಕಾರಿಗಳು ಸರ್ವೆ ನಡೆಸಿ ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ ಎಂದಿದ್ದಾರೆ.

2015 ರಲ್ಲಿ ಮೊದಲ ಬಾರಿಗೆ ಸಮಸ್ಯೆ ಕಾಣಿಸಿಕೊಂಡಾಗ ಸಮಸ್ಯೆ ಪರಿಹರಿಸಬೇಕೆಂದು ನಾನು ಸಲಹೆ ನೀಡಿದ್ದೆ. ಜಿಲ್ಲಾಡಳಿತ ಮತ್ತು ಇತರ ರಾಜಕೀಯ ನಾಯಕರು ವಿಷಯಗಳನ್ನು ಕಾರ್ಯಗತಗೊಳಿಸಲು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಯಾವುದೇ ನಿಜವಾದ ಫಲಾನುಭವಿಗೆ ಹಾನಿಯಾಗುವುದಿಲ್ಲ ಎಂದು ಬೆಲ್ಲದ್ ಸ್ಪಷ್ಟ ಪಡಿಸಿದ್ದಾರೆ.

SCROLL FOR NEXT