ಗೋ ಬ್ಯಾಕ್ ಪೋಸ್ಟರ್
ಗೋ ಬ್ಯಾಕ್ ಪೋಸ್ಟರ್ 
ರಾಜ್ಯ

'ಮರಳು ಮಾಫಿಯಾದವರಿಗೆ ಮರಳಾಗಬೇಡಿ': ಚಾಮರಾಜನಗರದಲ್ಲಿ ಸುನೀಲ್ ಬೋಸ್ ವಿರುದ್ಧ 'ಗೋ ಬ್ಯಾಕ್' ಪೋಸ್ಟರ್ ಪ್ರತ್ಯಕ್ಷ!

Manjula VN

ಚಾಮರಾಜನಗರ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ಕೆಲವೆಡೆ ಮರಳು ಮಾಫಿಯಾದ ಅನಭಿಷಿಕ್ತ ದೊರೆ ಗೋ ಬ್ಯಾಕ್ ಎಂಬ ಪೋಸ್ಟರ್‌ಗಳು ಕಂಡು ಬಂದವು.

ಮರಳು ಮಾಫಿಯಾದವರಿಗೆ ಮರಳಾಗಬೇಡಿ ಎಂಬ ಶೀರ್ಷಿಕೆಯಲ್ಲಿನ ಪೋಸ್ಟರ್‌ಗಳು ನಗರದ ಭುವನೇಶ್ವರಿ ವೃತ್ತ, ಜೋಡಿ ರಸ್ತೆ ಹಾಗೂ ಸಂತೆಮರಹಳ್ಳಿ ರಸ್ತೆಯ ಬದಿಗಳಲ್ಲಿ ಕಂಡು ಬಂದಿತು. ಈ ಪೋಸ್ಟರ್ ಗಳಲ್ಲಿ ಹಸ್ತದ ಚಿಹ್ನೆಯನ್ನು ತಲೆಕೆಳಕಾಗಿ ಹಾಕಿ ಎಕ್ಸ್‌ ಮಾರ್ಕ್ ಹಾಕಿರುವುದು ಕಂಡು ಬಂದಿದೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪೋಸ್ಟರ್ ಗಳನ್ನು ತೆರವುಗೊಳಿಸಿದರು.

ಆರೋಪ ಸಾಬೀತುಪಡಿಸಿದರೆ ನಾಮಪತ್ರವೇ ಸಲ್ಲಿಸಲ್ಲ

ಈ ನಡುವೆ ಪೋಸ್ಟರ್​ ವಿಚಾರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸುನೀಲ್ ಬೋಸ್, 'ಗೋ ಬ್ಯಾಕ್ ಸುನಿಲ್ ಬೋಸ್' ಎಂದು ಪೋಸ್ಟರ್ ಅಂಟಿಸಿರುವುದು ಬಿಜೆಪಿಯವರು. ಅವರೇ ಅಪಪ್ರಚಾರ ಮಾಡುತ್ತಿದ್ದಾರೆ. ಗೋ ಬ್ಯಾಕ್ ಎಂದು ಯಾಕೆ ಹಾಕಿದ್ದಾರೆ? ನಾನು ಹೊರಗಿನವನಾ? ಮರಳು ಮಾಫಿಯಾ ಕೇಸ್​ ಕೋರ್ಟ್​ನಲ್ಲಿ ವಜಾ ಆಗಿದೆ. ಕ್ಲೀನ್​ ಚಿಟ್​ ಕೊಡಲಾಗಿದೆ. ಬಿಜೆಪಿಯವರಿಗೆ ಸವಾಲು ಹಾಕುತ್ತೇನೆ. ನನ್ನ ವಿರುದ್ಧ ಮರಳು ದಂಧೆ ಆರೋಪ ಸಾಬೀತು ಮಾಡಿದರೇ ನಾನು ನಾಮಪತ್ರವನ್ನೇ ಸಲ್ಲಿಸುವುದಿಲ್ಲ ಎಂದು ಹೇಳಿದರು.

ಗೋ ಬ್ಯಾಕ್ ಬರೆದವರ ವಿರುದ್ಧ ದೂರು ಕೊಡುತ್ತೇನೆ. ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ದೂರು ಕೊಡಲಾಗುವುದು. ಮಾಧ್ಯಮವರು ಹೇಳಿದ ಮೇಲೆ "ಗೋ ಬ್ಯಾಕ್" ವಿಚಾರ ಗಮನಕ್ಕೆ ಬಂದಿದೆ. ಬಿಜೆಪಿಯವರು ಈ ಅಪಪ್ರಚಾರ ಮಾಡಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಕಾಂಗ್ರೆಸ್​ ಈ ಬಾರಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT