ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು
ಕ್ರೀಡಾಂಗಣಕ್ಕೆ ಸಂಸ್ಕರಿಸಿದ ನೀರು 
ರಾಜ್ಯ

Bengaluru water crisis: IPL 2024 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರು ಬಳಕೆ: ವರದಿ ಕೇಳಿದ NGT

Srinivasamurthy VN

ಬೆಂಗಳೂರು: ಬೆಂಗಳೂರು ನೀರಿನ ಬಿಕ್ಕಿಟ್ಟಿನ ನಡುವೆಯೇ ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಸ್ಕರಿಸಿದ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವರದಿ ಕೇಳಿದೆ.

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟಿನ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್‌ ಪಂದ್ಯಗಳಿಗೆ ಸಂಸ್ಕರಿಸಿದ ನೀರನ್ನು ಪೂರೈಕೆ ಮಾಡಿರುವುದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಪ್ರಧಾನ ಪೀಠ ಗಂಭೀರವಾಗಿ ಪರಿಗಣಿಸಿದ್ದು, ರೀಡಾಂಗಣದಲ್ಲಿ ನೀರಿನ ಬಳಕೆಯ ಪ್ರಸ್ತುತ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಆದೇಶಿಸಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ಹಾಗೂ ತಜ್ಞ ಸದಸ್ಯ ಎ.ಸೆಂಥೊಲ್‌ ವೇಲ್ ಅವರನ್ನು ಒಳಗೊಂಡ ಪೀಠವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮನವಿಯ ಆಧಾರದಲ್ಲಿ ಕಬ್ಬನ್‌ ಉದ್ಯಾನದ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಸಂಸ್ಕರಿಸಿದ ನೀರನ್ನು ಕ್ರೀಡಾಂಗಣಕ್ಕೆ ಸರಬರಾಜು ಮಾಡಲು ಜಲಮಂಡಳಿ ಅನುಮತಿ ನೀಡಿದೆ.

ಮೂಲಗಳ ಪ್ರಕಾರ ಈ ಕ್ರೀಡಾಂಗಣದಲ್ಲಿ ಮೂರು ಐಪಿಎಲ್‌ ಪಂದ್ಯಗಳು ನಿಗದಿಯಾಗಿವೆ. ಪ್ರತಿ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ನೀರುಣಿಸಲು 75 ಸಾವಿರ ಲೀಟರ್ ಸಂಸ್ಕರಿಸಿದ ನೀರನ್ನು ಬಳಕೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮೇ 2ಕ್ಕೆ ಮುಂದಿನ ವಿಚಾರಣೆ

ಕ್ರೀಡಾಂಗಣಕ್ಕೆ ಸರಬರಾಜು ಮಾಡುವ ನೀರಿನ ಗುಣಮಟ್ಟ ಮತ್ತು ಕ್ರೀಡಾಂಗಣದಲ್ಲಿ ಬಳಸಿದ ಅಂತರ್ಜಲದ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಜಲಮಂಡಳಿಗೆ ಸೂಚಿಸಿದೆ. ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಮೇ 2ಕ್ಕೆ ಮುಂದೂಡಲಾಗಿದೆ.

SCROLL FOR NEXT