ಹೈಕೋರ್ಟ್‌
ಹೈಕೋರ್ಟ್‌ 
ರಾಜ್ಯ

2ನೇ ಉಪಲೋಕಾಯುಕ್ತ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

Manjula VN

ಬೆಂಗಳೂರು: 2ನೇ ಉಪಲೋಕಾಯುಕ್ತರ ಹುದ್ದೆಯ ನೇಮಕಕ್ಕೆ ಸಂಬಂಧಿಸಿದ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಸಮಾಜ ಪರಿವರ್ತನಾ ಸಮುದಾಯದ ಎಸ್‌ ಆರ್‌ ಹಿರೇಮಠ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎಸ್‌ ಬಸವರಾಜು ಅವರು “ಎರಡನೇ ಉಪಲೋಕಾಯುಕ್ತ ಹುದ್ದೆಯು ಕಳೆದ ಎರಡು ವರ್ಷಗಳಿಂದ ಖಾಲಿ ಬಿದ್ದಿದೆ. ವಿರೋಧ ಪಕ್ಷದ ನಾಯಕರ ನೇಮಕವಾಗಿಲ್ಲ ಎಂದು ಸರ್ಕಾರ ವಿಳಂಬ ಮಾಡಿತ್ತು. ಈಗ ಉಪಲೋಕಾಯುಕ್ತರ ನೇಮಕಾತಿಗೆ ಶಿಫಾರಸ್ಸು ಮಾಡಲಾಗಿದೆ ಎನ್ನಲಾಗುತ್ತಿದೆ” ಎಂದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿ ಅಂಜಾರಿಯಾ ಅವರು ಪ್ರಕ್ರಿಯೆಯಂತೂ ನಿಂತಿಲ್ಲ ಎಂದರು. ಈ ವೇಳೆ ಬಸವರಾಜು ಅವರು ಪ್ರತಿಕ್ರಿಯಿಸಿ “ಹಾಗಾದರೆ ಅಂತಿಮ ಹಂತದಲ್ಲಿದೆಯೇ? ಎಂದು ಲಘು ದಾಟಿಯಲ್ಲಿ ಕೇಳಿದರು.

ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಉಪಲೋಕಾಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಇನ್ನೊಂದು ಅರ್ಜಿ ಸಲ್ಲಿಕೆಯಾಗಿದೆ. ಎರಡನ್ನೂ ಒಟ್ಟಿಗೆ ಸೇರಿಸಿ ವಿಚಾರಣೆಗೆ ಪರಿಗಣಿಸಬೇಕು ಎಂದರು. ಅಂತಿಮವಾಗಿ ಪೀಠವು ಪ್ರಕರಣದ ವಿಚಾರಣೆಯನ್ನು ಜೂನ್‌ 25ಕ್ಕೆ ಮುಂದೂಡಿತು.

2022ರ ಜೂನ್‌ 14ರಂದು ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದ ನಿವೃತ್ತ ನ್ಯಾಯಮೂರ್ತಿ ಬಿ ಎಸ್‌ ಪಾಟೀಲ್‌ ಅವರಿಗೆ ಲೋಕಾಯುಕ್ತ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆಗಿನಿಂದ ಉಪ ಲೋಕಾಯುಕ್ತ ಹುದ್ದೆ ಖಾಲಿ ಇದೆ. ಮತ್ತೊಂದು ಉಪ ಲೋಕಾಯುಕ್ತ ಹುದ್ದೆಗೆ ನ್ಯಾ. ಕೆ ಎನ್‌ ಫಣೀಂದ್ರ ಅವರನ್ನು 2022ರ ಮಾರ್ಚ್‌ 23ರಂದು ಸರ್ಕಾರ ನೇಮಿಸಿತ್ತು.

SCROLL FOR NEXT