ಹೈಕೋರ್ಟ್ 
ರಾಜ್ಯ

ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ತನಿಖೆಗೆ ಕಾಲಮಿತಿ ಇಲ್ಲವೇ; ಸಿಬಿಐಗೆ ಹೈಕೋರ್ಟ್ ಪ್ರಶ್ನೆ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್‌ಐಆರ್‌ ದಾಖಲಿಸಿ ಸುಮಾರು 4 ವರ್ಷಗಳಾದರೂ ಅಂತಿಮ ವರದಿ ಸಲ್ಲಿಸದಿರುವ ಕುರಿತು ಶುಕ್ರವಾರ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿತು.

ಬೆಂಗಳೂರು: ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್‌ಐಆರ್‌ ದಾಖಲಿಸಿ ಸುಮಾರು 4 ವರ್ಷಗಳಾದರೂ ಅಂತಿಮ ವರದಿ ಸಲ್ಲಿಸದಿರುವ ಕುರಿತು ಶುಕ್ರವಾರ ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿತು.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆಯ ಅಂತಿಮ ಹಂತದಲ್ಲಿ ನ್ಯಾ. ಅಡಿಗ ಅವರು ಸಿಬಿಐ ಇನ್ನೂ ವಿಚಾರಣೆ ಆರಂಭಿಸಿಲ್ಲವೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಮುಂದುವರಿಸಿದ ನ್ಯಾ. ಸೋಮಶೇಖರ್‌ ಅವರು ಸಿಬಿಐ ಯಾವಾಗ ಎಫ್‌ಐಆರ್‌ ದಾಖಲಿಸಿತು ಎಂದು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಪ್ರಸನ್ನ ಕುಮಾರ್‌ ಅವರು “2020ರ ಅಕ್ಟೋಬರ್‌ 3ರಂದು ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಕೆ ಶಿವಕುಮಾರ್‌ ಅವರು ಆರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದರು. ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು” ಎಂದು ಸಮಜಾಯಿಷಿ ನೀಡಿದರು.

ಇದಕ್ಕೂ ಮುನ್ನ ವಾದಿಸಿದ ಪ್ರಸನ್ನ ಕುಮಾರ್‌ “ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ ಕೆ ಶಿವಕುಮಾರ್‌ ಅವರ ಅಕ್ರಮ ಆಸ್ತಿಯು 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ. 49.13ರಷ್ಟು ಹೆಚ್ಚಳವಾಗಿದೆ” ಎಂದರು.

ಸಿಬಿಐ ತನಿಖೆ ರದ್ದತಿ ಕೋರಿ ಡಿ ಕೆ ಶಿವಕುಮಾರ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್‌ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದ್ದಾಗ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ ಎಂದು ಆಕ್ಷೇಪಿಸಿದರು.

ಜನರಲ್‌ ಕ್ಲಾಸಸ್‌ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಹೊಂದಿದೆಯೇ? ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದಾದರೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಗತಿ ಏನು? ‌ಜನರಲ್‌ ಕ್ಲಾಸಸ್‌ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ವಿಚಾರಣೆ ಮುಂದೂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT