ಕಂದಾಯ ಸಚಿವ ಕೃಷ್ಣ ಬೈರೇಗೌಡ
ಕಂದಾಯ ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ರಾಜ್ಯದಲ್ಲಿ ಬರ ಘೋಷಣೆಯಾಗಿದೆ, ಆದರೆ ಇನ್ನೂ ಪರಿಹಾರ ಸಿಕ್ಕಿಲ್ಲ: ಕೇಂದ್ರ ಸರ್ಕಾರದ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ

Manjula VN

ಬೆಂಗಳೂರು: ಜಿಎಸ್‌ಟಿ ಸಂಗ್ರಹ ಮತ್ತು ತೆರಿಗೆ ಹಣ ನೀಡದೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ವಾಗ್ದಾಳಿ ನಡೆಸಿದರು.

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯಗಳ ಬಗ್ಗೆ ಚರ್ಚಿಸಲು ಬಹಿರಂಗ ಸವಾಲು ಹಾಕಿದ್ದ ಸಚಿವರು, ಜಾಗೃತ ಕರ್ನಾಟಕ, ರೈತ ಸಂಘ ಮತ್ತು ಕನ್ನಡಪಡ ಸಂಘಟನೆಗಳು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜಿಎಸ್‌ಟಿ, ಸೆಸ್‌, ತೆರಿಗೆ, ಬರ ಪರಿಹಾರ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಎಂಬ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಸಭೆಗೆ ಆಹ್ವಾನ ನೀಡಿದ್ದರೂ ನಿರ್ಮಲಾ ಸೀತಾರಾಮನ್ ಅವರು ಗೈರು ಹಾಜರಾಗಿದ್ದರು. ಬಳಿಕ ನಿರ್ಮಲಾ ಅವರ ವಿರುದ್ಧ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.

ಜಿಎಸ್‌ಟಿ ತೆರಿಗೆ ಪದ್ಧತಿ ಜಾರಿಯಾದ ನಂತರ ರಾಜ್ಯಕ್ಕೆ ತೆರಿಗೆ ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯವಾಗುತ್ತಿದೆ. ಇದಲ್ಲದೆ, ಬರ ಪರಿಹಾರ ಹಾಗೂ ರಾಜ್ಯದ ನೀರಾವರಿ ಯೋಜನೆಗಳು ಸೇರಿದಂತೆ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ಕಿಡಿಕಾರಿದರು.

ಜಿಎಸ್‌ಟಿ ಜಾರಿಯಾಗುವ ಮೊದಲು ಮೌಲ್ಯವರ್ದಿತ ತೆರಿಗೆ ಜಾರಿಯಲ್ಲಿತ್ತು. ಜಿಎಸ್‌ಟಿ ಜಾರಿಯಾದ ನಂತರ 2019-20ರಲ್ಲಿ ರಾಜ್ಯದ ತೆರಿಗೆ ಆದಾಯದಲ್ಲಿ ರೂ.18,897 ಕೋಟಿ ಖೋತಾ ಆಗಿದೆ. 2023-24ರಲ್ಲಿ ರೂ.34,570 ಕೋಟಿ ನಷ್ಟವಾಗಿದೆ. 2020-21 ರಲ್ಲಿ ರಾಜ್ಯಕ್ಕೆ ರೂ.5495 ಕೋಟಿ ಹಾಗೂ 2021-26ರ ಅವಧಿಯಲ್ಲಿ ರೂ.6000 ಕೋಟಿ ಪರಿಹಾರ ನೀಡಬೇಕು ಎಂದು 15ನೇ ಹಣಕಾಸು ಆಯೋಗ ತನ್ನ ಅಂತಿಮ ವರದಿಯಲ್ಲಿ ತಿಳಿಸಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ಈ ಹಣ ಬಿಡುಗಡೆ ಮಾಡಿಲ್ಲ.

ಈ ಹಿಂದೆ ಕೇಂದ್ರ ತೆರಿಗೆಯಲ್ಲಿ ರಾಜ್ಯಕ್ಕೆ ಶೇ.4.713 ರಷ್ಟು ತೆರಿಗೆ ಪಾಲು ಇತ್ತು. ಆದರೆ, 15ನೇ ಹಣಕಾಸು ಆಯೋಗ ಈ ಪ್ರಮಾಣವನ್ನು 3.617 ಕ್ಕೆ ಇಳಿಸಿದೆ. ಇದರಿಂದ ರಾಜ್ಯಕ್ಕೆ ಶೇ.23 ರಷ್ಟು ಹಣ ಕಡಿಮೆಯಾಗಿದೆ. ಇದರಿಂದ ರಾಜ್ಯಕ್ಕೆ ಈವರೆಗೆ ಒಟ್ಟಾಗಿ ರೂ.62,098 ಕೋಟಿ ನಷ್ಟ ಉಂಟಾಗಿದೆ.

ಕೇಂದ್ರ ಸರ್ಕಾರ ಸಂಗ್ರಹಿಸುವ ಸೆಸ್ ರ್ಚಾರ್ಜ್ ನಲ್ಲೂ ರಾಜ್ಯಕ್ಕೆ ಪಾಲು ನೀಡಬೇಕು. ಆದರೆ, 2020 ರಲ್ಲಿ ರಾಜ್ಯಗಳಿಗೆ ಪಾಲು ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಮಾಡಿ ಮಾಡಿದೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದರೆ ರಾಜ್ಯಗಳಿಗೆ ಪಾಲು ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅದನ್ನು ಸೆಸ್‌ ರ್ಚಾರ್ಜ್ ಗೆ ಸೇರಿಸಿದೆ. 2017-18 ರಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಂದ ರೂ.2,18,553 ಕೋಟಿ ತೆರಿಗೆ ಹಣ ಕೇಂದ್ರದ ಪಾಲಾಗಿದ್ದರೆ, 2022-23 ರಲ್ಲಿ ರೂ. 5,52,789 ಕೋಟಿ ಹಣ ಸಂಗ್ರಹಿಸಲಾಗಿದೆ. ಆದರೆ, ಇದರಲ್ಲಿ ರಾಜ್ಯಗಳಿಗೆ ನಯಾಪೈಸೆಯೂ ಪಾಲಿಲ್ಲ.

ಕೇಂದ್ರ ಸರ್ಕಾರ ಆದಾಯ ತೆರಿಗೆಯ ಹಲವು ವಿಭಾಗಗಳನ್ನು ಸೆಸ್‌ ಸರ್‌ಚಾರ್ಜ್‌ ಗೆ ಸೇರ್ಪಡೆ ಮಾಡಿದ್ದು, 2014-2024ರ ಅವಧಿಯಲ್ಲಿ ಈ ವಿಭಾಗದಲ್ಲಿ 34 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಆದರೆ, ರಾಜ್ಯ ಸರ್ಕಾರಗಳಿಗೆ ಇದರಲ್ಲಿ ಎಳ್ಳಷ್ಟೂ ಪಾಲಿಲ್ಲ. ಪರಿಣಾಮ ಈ ವಿಭಾಗದಲ್ಲಿ ರಾಜ್ಯಕ್ಕೆ ಒಟ್ಟಾರೆ ರೂ.1,85,468 ಕೋಟಿ ನಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ರೂ 5,300 ಕೋಟಿ ಬಜೆಟ್‌ನಲ್ಲಿ ಹಣ ಘೋಷಿಸಲಾಗಿತ್ತು. ಆದರೆ ಈವರೆಗೆ ಒಂದು ರೂಪಾಯಿಯೂ ಬಂದಿಲ್ಲ. ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ, ಈವರೆಗೆ ನಯಾಪೈಸೆಯೂ ಬಂದಿಲ್ಲ. ಮಹದಾಯಿಯಲ್ಲಿ ಕರ್ನಾಟಕ 7.25 ಟಿಎಂಸಿ ಕುಡಿಯುವ ನೀರನ್ನು ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ನಾಲ್ಕು ವರ್ಷಗಳಾಗಿವೆ. ಆದರೆ, ಕೇಂದ್ರ ಪರಿಸರ ಇಲಾಖೆಯಿಂದ ಇದಕ್ಕೆ ಒಂದೇ ಒಂದು ಅನುಮತಿ ಕೊಡಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕಿದೆ ಎಂದರು.

ತಮಿಳುನಾಡಿಗೆ ನೀಡಬೇಕಾದ 192 ಟಿಎಂಸಿ ನೀರು ಕೊಡಬೇಕು. ಆದರೆ , ಕೆಲವೊಮ್ಮೆ ಉತ್ತಮ ಮಳೆಯಾದಾಗ 100 ರಿಂದ 120 ಟಿಎಂಸಿ ನೀರು ಹೆಚ್ಚುವರಿಯಾಗಿ ಹೋಗುತ್ತದೆ. ಈ ನೀರನ್ನು ರಾಜ್ಯವೇ ಬಳಸಿಕೊಳ್ಳುವ ನಿಟ್ಟಿನಲ್ಲಿ 2016ರಲ್ಲಿ ಮೇಕೆದಾಟು ಯೋಜನೆ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ. ಆದರೆ, ಇಲ್ಲಿವರೆಗೆ ಒಪ್ಪಿಗೆ ಕೊಟ್ಟಿಲ್ಲ. ಕಾವೇರಿ ಟ್ರಿಬ್ಯುನಲ್ ಒಪ್ಪಿಗೆಯಿದೆ. ಆದರೆ, ಕೇಂದ್ರ ಸರ್ಕಾರ ಈ ಯೋಜನೆಗೆ ಒಪ್ಪಿಗೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

SCROLL FOR NEXT