ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ) PTI
ರಾಜ್ಯ

ಬೆಳಗಾವಿ ಮಹಿಳೆ ವಿವಸ್ತ್ರ ಪ್ರಕರಣ ಹೈಕೋರ್ಟ್‌ ನಲ್ಲಿ ಇತ್ಯರ್ಥ; ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ

Manjula VN

ಬೆಂಗಳೂರು: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 12 ಆರೋಪಿಗಳನ್ನು ಬಂಧಿಸಿದ್ದು, ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸೋಮವಾರ ಮಾಹಿತಿ ನೀಡಿದೆ.

ಪ್ರಕರಣ ಸಂಬಂಧ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಂಧಿಸಲಾಗಿದೆ. ಈಗಾಗಲೇ ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಂತ್ರಸ್ತೆಗೆ ಎರಡು ಎಕರೆ ಜಮೀನು ಹಾಗೂ 5 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಗಿದೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಲು ವಿಚಾರಣಾಧೀನ ನ್ಯಾಯಲಯಕ್ಕೆ ಕಾಲಮಿತಿ ನಿಗದಿಪಡಿಸಬೇಕು. ಇದು ಅತಿ ಅಪರೂಪದ ಪ್ರಕರಣವಾಗಿದ್ದು, ಮರುಳಿಕಸದಂತೆ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಬೇಕಿದೆ” ಎಂದು ಪೀಠಕ್ಕೆ ವಿವರಿಸಿದರು.

ಸಂತ್ರಸ್ತೆಯ ಆರೋಗ್ಯ ಸ್ಥಿತಿಗತಿಯ ಮೇಲೆ ನಿಗಾ ವಹಿಸಲಾಗುವುದು. ಆಕೆಯ ಮಾನಸಿಕ ಆರೋಗ್ಯ ಪರಿಗಣಿಸಿ ಒಂದು ವರ್ಷದ ಅವಧಿಯವರೆಗೆ ಎರಡು ತಿಂಗಳಿಗೊಮ್ಮೆ ತಜ್ಞರು ಸಮಾಲೋಚನೆಗೆ ಒಳಪಡಿಸಲು ಅವಕಾಶ ನೀಡಬೇಕು” ಎಂದು ನ್ಯಾಯಾಲಯವನ್ನು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠವು ಆ ಸಂಗತಿಗಳನ್ನು ಮೇಲ್ವಿಚಾರಣೆ ನಡೆಸಲಾಗದು. ಪ್ರಕರಣದ ವರದಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಅರ್ಜಿ ಕುರಿತು ಮುಂದಿನ ದಿನಗಳಲ್ಲಿ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿ ಪ್ರಕರಣವನ್ನು ಇತ್ಯರ್ಥಪಡಿಸಿತು.

2023ರ ಡಿಸೆಂಬರ್‌ 11ರಂದು ಬೆಳಗಾವಿಯ ಜಿಲ್ಲೆಯ ವಂಟಮೂರಿಯಲ್ಲಿ ಒಂದೇ ಸಮುದಾಯದ ಪ್ರೇಮಿಗಳು ಮನೆಬಿಟ್ಟು ಪರಾರಿಯಾಗಿದ್ದರು. ಯುವತಿ ಕುಟುಂಬದವರು ಯುವಕನ ತಾಯಿಯನ್ನು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗೆ ಎಳೆದು ಬೆತ್ತಲೆಗೊಳಿಸಿದ್ದರು. ಅಲ್ಲದೆ, ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದರು. ಪ್ರಕರಣ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ 2023ರ ಡಿಸೆಂಬರ್‌ 11ರಂದು ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣದ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

SCROLL FOR NEXT