ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು.
ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು. 
ರಾಜ್ಯ

ನೇಹಾ ಹತ್ಯೆ ಪ್ರಕರಣ: ಗೃಹ ಸಚಿವ ಪರಮೇಶ್ವರ್ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ, ಹಲವರು ವಶಕ್ಕೆ

Manjula VN

ಬೆಂಗಳೂರು: ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ಕೊಲೆಗೆ ಪ್ರೀತಿ ಕಾರಣ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಹಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಶನಿವಾರ ತಿಳಿದುಬಂದಿದೆ.

ಸದಾಶಿವನಗರದ ಗೃಹ ಸಚಿವರ ಸರ್ಕಾರಿ ನಿವಾಸದ ಮುಂದೆ ಎಬಿವಿಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ಈ ವೇಳೆ ಮುತ್ತಿಗೆಗೆ ಯತ್ನಿಸಿದರು. ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.

ಎಬಿವಿಪಿ ಕಾರ್ಯಕರ್ತರ ಮುತ್ತಿಗೆ ಯತ್ನ ಹಿನ್ನೆಲೆ ಪರಮೇಶ್ವರ್ ನಿವಾಸದ ಸುತ್ತ ಬಿಗಿಭದ್ರತೆ ಏರ್ಪಡಿಸಲಾಗಿತ್ತು. 100ಕ್ಕೂ ಹೆಚ್ಚು ಪೊಲೀಸರಿಂದ ಗೃಹ ಸಚಿವರ ಮನೆ ಬಳಿ ಎರಡು ಕಡೆ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತ್ ಮಾಡಿದ್ದರು. ಮುತ್ತಿಗೆ ವೇಳೆ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲೇ ಇದ್ದರು ಎಂದು ತಿಳಿದುಂಬದಿದೆ.

ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು, ನ್ಯಾಯ ಕೊಡುವಂತೆ ಆಗ್ರಹಿಸಿದರು. ಕೆಲ ಹೊತ್ತು ಮನೆ ಮುಂದೆ ಕೂತು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇವಲ ಬೆಂಗಳೂರು ಅಷ್ಟೇ ಅಲ್ಲದೆ, ರಾಮನಗರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಫಯಾಜ್ ಫೋಟೋ ಹಾಗೂ ಟೈಯರ್'ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ನಡುವೆ ಘಟನ ಸಂಬಂಧ ಪ್ರತಿಕ್ರಿಯೆ ನಡಿರುವ ಬಿಜೆಪಿ ಸಂಸದ ವಿವೈ ರಾಘವೇಂದ್ರ ಅವರು, ಆರೋಪಿ ಗಾಂಜಾ ಸೇವಿಸಿ ನೇಹಾ ಹತ್ಯೆ ಮಾಡಿದ್ದಾನೆಂದು ಹೇಳಿದ್ದಾರೆ.

ಘಟನೆಯ ನಂತರ ಸರ್ಕಾರ ನೇಹಾ ಕುಟುಂಬಕ್ಕೆ ರಕ್ಷಣೆ ನೀಡಬೇಕಿತ್ತು, ಬದಲಿಗೆ ಆರೋಪಿಗಳ ಕುಟುಂಬಕ್ಕೇ ರಕ್ಷಣೆ ನೀಡಿದೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಪ್ರಕರಣ ವೈಯಕ್ತಿಕ ವಿಚಾರ ಎಂದು ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ಕೋನ ನೀಡಿ ಪ್ರಕರಣವನ್ನು ತಿರುಚಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ಬೆಳವಣಿಗೆಯಲ್ಲಿ, ಫಯಾಜ್ ಜೊತೆಗಿನ ನೇಹಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫಯಾಜ್ ಮತ್ತು ನೇಹಾ ಮದುವೆಯಾಗಲು ಬಯಸಿದ್ದರು ಎಂಬ ಆರೋಪವನ್ನು ನೇಹಾ ಪೋಷಕರು ನಿರಾಕರಿಸಿದ್ದಾರೆ.

ಮದುವೆಯ ವಿಷಯವೇ ಇರಲಿಲ್ಲ. ಈಗ, ಕಥೆ ಕಟ್ಟಲಾಗದುತ್ತಿದೆ. ಆರೋಪಿಯು ನನ್ನ ಮಗಳನ್ನು ಮದುವೆಯಾಗಲು ಬಯಸಿರಬಹುದು. ಆದರೆ, ನನ್ನ ಮಗಳು ನೇಹಾ ಅದರ ಬಗ್ಗೆ ಯೋಚಿಸಿರಲಿಲ್ಲ. ಆಕೆ ಒಪ್ಪಿದ್ದರೆ ಈ ರೀತಿಯ ಪರಿಸ್ಥಿತಿ ಎದುರಿಸುತ್ತಿರಲಿಲ್ಲ. ಈ ಬೆಳವಣಿಗೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ನೇಹಾಳ ತಾಯಿ ಗೀತಾ ಮಾತನಾಡಿ, ನನ್ನ ಮಗಳು ಧೈರ್ಯಶಾಲಿ. ಬುದ್ಧಿವಂತ ಹುಡುಗಿ. ಹಂತಕನೊಂದಿಗೆ ಆಕೆಯ ಸಂಬಂಧ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಹಂತಕನನ್ನು ನೇಣಿಗೇರಿಸಿದರೆ ಮಾತ್ರ ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮೊದಲು ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ. ಕಾಲೇಜಿಗೆ ಕಳುಹಿಸಿದ ನಮ್ಮ ಹೆಣ್ಣುಮಕ್ಕಳು ಮೃತದೇಹದ ರೂಪದಲ್ಲಿ ಮರಳಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

SCROLL FOR NEXT