ನೇಹಾ, ಪರಮೇಶ್ವರ್,ಎಚ್ ಡಿಕೆ ಸಾಂದರ್ಭಿಕ ಚಿತ್ರ
ನೇಹಾ, ಪರಮೇಶ್ವರ್,ಎಚ್ ಡಿಕೆ ಸಾಂದರ್ಭಿಕ ಚಿತ್ರ 
ರಾಜ್ಯ

ರಾಜಕೀಯ ಸ್ವಾರ್ಥಕ್ಕಾಗಿ ಕೊಲೆಯಾದ ಹೆಣ್ಣುಮಗಳ ಚಾರಿತ್ರ್ಯಹರಣ: ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಿಡಿ

Nagaraja AB

ಬೆಂಗಳೂರು: ಕಾಂಗ್ರೆಸ್ ರಾಜಕೀಯ ಸ್ವಾರ್ಥಕ್ಕಾಗಿ ಕೊಲೆಯಾದ ಹೆಣ್ಣುಮಗಳ ಚಾರಿತ್ರ್ಯಹರಣ ಮಾಡುವ ಕುಕೃತ್ಯವನ್ನು ನಡೆಸುತ್ತಿದೆ ಎಂದು ಜೆಡಿಎಸ್ ಶನಿವಾರ ಕಿಡಿಕಾರಿದೆ. ನೇಹಾ ಹತ್ಯೆ ಕುರಿತು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಜೆಡಿಎಸ್, ಸುಶಿಕ್ಷಿತರು, ವಿದೇಶದಲ್ಲಿ ಓದಿದವರು ಹಾಗೂ ನಾಡಿನ ಗೃಹಮಂತ್ರಿ ಸಾಹೇಬರಾದ ಡಾ. ಜಿ. ಪರಮೇಶ್ವರ್, ಹುಬ್ಬಳ್ಳಿಯಲ್ಲಿ ವಿಕೃತಪ್ರೇಮಿಗೆ ಬಲಿಯಾದ ವಿದ್ಯಾರ್ಥಿನಿ ಬಗ್ಗೆ ಬೇಜವಾಬ್ದಾರಿತನದಿಂದ ನಾಲಿಗೆ ಜಾರಿಬಿಟ್ಟು ಕಾಂಗ್ರೆಸ್ ಸಂಸ್ಕೃತಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಅವರಿಗೆ ನಮ್ಮ ಧಿಕ್ಕಾರ! ಕೊಲೆಯಾದ ನತದೃಷ್ಟ ಯುವತಿ ಹಾಗೂ ಕೊಲೆಗಾರ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಕೊಲೆ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲೆತ್ನಿಸಿದ ಮಂತ್ರಿಗಳು, ಅತ್ಯಂತ ಅಸೂಕ್ಷ್ಮವಾಗಿ ಹೇಳಿಕೆ ನೀಡಿದ್ದಾರೆ ಎಂದು ಖಂಡಿಸಿದೆ.

ಇಂತಹ ಕೊಲೆಗಳು ಆಕಸ್ಮಿಕವಾಗಿ ನಡೆಯುತ್ತವೆ ಎಂದು ಹೇಳಿರುವ ಸಚಿವರ ಅಸಲಿ ಉದ್ದೇಶ ಏನು? ಎನ್ನುವುದು ಇಲ್ಲಿ ಪ್ರಶ್ನಾರ್ಹ. ಜನರಿಂದ ಈ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾದ ಮೇಲೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಹೊಣೆಗೇಡಿ ಹೇಳಿಕೆ ಕೊಟ್ಟು ಹೆತ್ತ ತಂದೆತಾಯಿಗೆ ಮತ್ತಷ್ಟು ನೋವು ಕೊಟ್ಟ ಸಚಿವರ ಹೇಳಿಕೆ ಖಂಡಿಸಿ ರಾಜ್ಯ ಮಹಿಳಾ ಆಯೋಗ ಈಗಾಗಲೇ ಸ್ವಯಂ ಪ್ರಕರಣ ದಾಖಲು ಮಾಡಿಕೊಳ್ಳಬೇಕಿತ್ತು. ಹಾಗೆ ಆಗಿಲ್ಲ, ಇದು ನಿಜಕ್ಕೂ ವಿಷಾದನೀಯ ಎಂದು ಟೀಕಿಸಿದೆ.

ಕಾಂಗ್ರೆಸ್ ಸರಕಾರ ಹೇಗೆ ಕೆಲಸ ಮಾಡುತ್ತಿದೆ, ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ. ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕೊಲೆಯಾದ ಹೆಣ್ಣುಮಗಳ ಚಾರಿತ್ರ್ಯಹರಣ ಮಾಡುವ ಕುಕೃತ್ಯವನ್ನು ನಡೆಸುತ್ತಿದೆ. ಇದು ಮಹಾಪಾಪ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಹೇಳಿಕೆ ಕಾಂಗ್ರೆಸ್ ನೈತಿಕ ಅವನತಿಯ ಪರಾಕಾಷ್ಠೆಯಾಗಿದೆ. ಬೆಳಗ್ಗೆಯಿಂದ ಕೆಲ ಫೋಟೋಗಳು ಹರಿದಾಡುತ್ತಿವೆ, ಅವುಗಳನ್ನು ಹೊರಬಿಟ್ಟವರು ಯಾರು? ಪ್ರಕರಣದ ದಿಕ್ಕು ತಪ್ಪಿಸಲು ಸರಕಾರವೇ ಅಧಿಕಾರಶಾಹಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ? ಇದೇ ಯಕ್ಷಪ್ರಶ್ನೆ ಎಂದು ಅನುಮಾನ ವ್ಯಕ್ತಪಡಿಸಿದೆ.

SCROLL FOR NEXT