ಸಾಂದರ್ಭಿಕ ಚಿತ್ರ 
ರಾಜ್ಯ

2 ಕೋಟಿ ರೂ. ನಗದು ಜಪ್ತಿ ಪ್ರಕರಣ: ಬಿಜೆಪಿ ಕಾರ್ಯದರ್ಶಿ ಸೇರಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲು

ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವ ಚುನಾವಣಾ ಅಕ್ರಮ ತಡೆ ತಂಡ, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರೆ...

ಬೆಂಗಳೂರು: ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವ ಚುನಾವಣಾ ಅಕ್ರಮ ತಡೆ ತಂಡ, ಈ ಸಂಬಂಧ ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು ಮತ್ತು ಇತರೆ ಇಬ್ಬರ ವಿರುದ್ಧ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದೆ.

ಕಾಟನ್‌ಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತನಿಖಾ ಠಾಣೆಯಲ್ಲಿ ಶನಿವಾರ ಸಂಜೆ ಕಾರು ತಪಾಸಣೆ ನಡೆಸಿದಾಗ ರೂ. 2 ಕೋಟಿ ನಗದು ಪತ್ತೆಯಾಗಿತ್ತು. ಅದು ಬಿಜೆಪಿ ರಾಜ್ಯ ಘಟಕದ ಕಚೇರಿಗೆ ಸೇರಿದ್ದು ಎಂಬುದಾಗಿ ಕಾರಿನಲ್ಲಿದ್ದವರು ದಾಖಲೆ ಒದಗಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನಗದನ್ನು ನೀಡಿ, ಸೂಕ್ತ ಕ್ರಮ ಜರುಗಿಸುವಂತೆ ಕೋರಿದ್ದರು.

ಹಣವನ್ನು ಬ್ಯಾಂಕ್‌ನಿಂದ ನಗದೀಕರಿಸಿರುವ ದಾಖಲೆಗಳಿರುವ ಕಾರಣದಿಂದ ಆದಾಯ ತೆರಿಗೆ (ಐ.ಟಿ) ಕಾಯ್ದೆಯ ಉಲ್ಲಂಘನೆ ಆಗಿಲ್ಲ ಎಂದು ಐ.ಟಿ ಅಧಿಕಾರಿಗಳು ಚುನಾವಣಾಧಿಕಾರಿಗಳಿಗೆ ತಿಳಿಸಿದ್ದರು. ನಗದನ್ನೂ ವಾಪಸ್‌ ಚುನಾವಣಾಧಿಕಾರಿಗಳ ವಶಕ್ಕೆ ಮರಳಿಸಿದ್ದರು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿ ನಗದು ಸಾಗಿಸುತ್ತಿದ್ದ ಆರೋಪದ ಮೇಲೆ ಇದೀಗ ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್‌ ದಾಖಲಿಸಿದ್ದಾರೆ.

ನಗದನ್ನು ಬ್ಯಾಂಕ್‌ನಿಂದ ಚೆಕ್‌ ಮೂಲಕ ಡ್ರಾ ಮಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ನೀಡಲು ಕಳುಹಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದ ಬಿಜೆಪಿ ರಾಜ್ಯ ಘಟಕದ ಕಾರ್ಯಾಲಯದ ಪತ್ರ ಕಾರಿನಲ್ಲಿತ್ತು. ಈ ಕುರಿತು ಐ.ಟಿ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಆದಾಯ ತೆರಿಗೆ ವಂಚನೆ ಆಗಿಲ್ಲ ಎಂಬುದು ಕಂಡುಬಂದಿತ್ತು’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಈ ಮಧ್ಯೆ, ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು ಭಾರತೀಯ ಚುನಾವಣಾ ಆಯೋಗಕ್ಕೆ ಕಾರ್ಯವಿಧಾನದ ಪ್ರಕಾರ ಮಾಹಿತಿ ನೀಡಿದ್ದಾರೆ.

ಇಸಿಐ ನಿರ್ದೇಶನಗಳ ಪ್ರಕಾರ ಚುನಾವಣೆಯಲ್ಲಿ ಪಕ್ಷದ ಪದಾಧಿಕಾರಿಗಳು ಅಥವಾ ಅಭ್ಯರ್ಥಿಗಳ ಏಜೆಂಟರ ವೆಚ್ಚಕ್ಕೆ ರೂ.10,000ಕ್ಕಿಂತ ಹೆಚ್ಚು ಮೊತ್ತವನ್ನು ನಗದು ರೂಪದಲ್ಲಿ ನೀಡುವಂತಿಲ್ಲ ಎಂದೂ ಸೂಚನೆ ನೀಡಲಾಗಿದೆ.

ಮಿತಿಗಿಂತ ಹೆಚ್ಚು ಮೊತ್ತವನ್ನು ಚೆಕ್‌ ಅಥವಾ ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯವಾಗಿದೆ. ಈ ಪ್ರಕರಣದಲ್ಲಿ ಆಯೋಗದ ನಿರ್ದೇಶನ ಉಲ್ಲಂಘಿಸಿರುವುದಲ್ಲದೇ, ಹಣ ಪಡೆಯುವವರ ಪಟ್ಟಿಯನ್ನೂ ಒದಗಿಸಿಲ್ಲ. ನಗದನ್ನು ಚುನಾವಣಾ ಅಕ್ರಮಕ್ಕೆ ಬಳಸುವ ಶಂಕೆಯ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಚುನಾವಣಾಧಿರಿಗಳು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಿಸಲು ಅನುಮತಿ ಕೋರಿ ಶನಿವಾರವೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ನ್ಯಾಯಾಲಯದ ಅನುಮತಿ ಲಭಿಸಿತ್ತು. ಲೋಕೇಶ್‌ ಅಂಬೆಕಲ್ಲು, ವಾಹನ ಚಾಲಕ ವೆಂಕಟೇಶ್‌ ಪ್ರಸಾದ್‌ ಮತ್ತು ಸಹ ಪ್ರಯಾಣಿಕ ಗಂಗಾಧರ್ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಜನರ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123, ಲಂಚ ಮತ್ತು ಅನಗತ್ಯ ಪ್ರಭಾವಕ್ಕೆ ಸಂಬಂಧಿಸಿದಂತೆ ಐಪಿಸಿಯ 171 (ಬಿ), (ಸಿ), (ಇ) ಮತ್ತು (ಎಫ್) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಎಫ್‌ಐಆರ್‌ನ ಪ್ರಕಾರ, ಎಸ್‌ಎಸ್‌ಟಿ ತಂಡವು ಶನಿವಾರ ಸಂಜೆ ವಾಹನವನ್ನು (ಕೆಎ-09-ಎಂಬಿ-2412) ತಡೆದು, ಪರಿಶೀಲನೆ ನಡೆಸಿದ್ದು, ಈ ವೇಳೆ ನಗದು ಹೊಂದಿರುವ ಎರಡು ಬ್ಯಾಗ್‌ಗಳನ್ನು ಪತ್ತೆ ಮಾಡಿದ್ದಾರೆ. ಕಾರಿನಲ್ಲಿ ವೆಂಕಟೇಶ್ ಪ್ರಸಾದ್ ಮತ್ತು ಗಂಗಾಧರ್ ಎಂಬ ಇಬ್ಬರು ವ್ಯಕ್ತಿಗಳಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಬಿಜೆಪಿಗೆ ಸೇರಿದ ಹಣವಿದು ಎಂದು ಒಪ್ಪಿಕೊಂಡರು ಮತ್ತು ಪತ್ರವೊಂದನ್ನು ಹಾಜರುಪಡಿಸಿದ್ದರು ಎಂದು ದಾಖಲಿಸಲಾಗಿದೆ.

ಪತ್ರದಲ್ಲಿ ಕೆನರಾ ಬ್ಯಾಂಕ್, ಕೋದಂಡರಾಮಪುರ ಶಾಖೆಯ ಖಾತೆ ಸಂಖ್ಯೆ ಮತ್ತು 5 ಕೋಟಿ ಹಿಂಪಡೆದ ಚೆಕ್ ವಿವರಗಳನ್ನು ನಮೂದಿಸಲಾಗಿದೆ. ಮೈಸೂರು-ಕೊಡಗು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡದ ಮತಗಟ್ಟೆ ಕಾರ್ಯಕರ್ತರಿಗೆ ವಿತರಿಸಲು ಕೆಎ-09 ಎಂಬಿ-2412 ನೋಂದಣಿ ಸಂಖ್ಯೆಯ ವಾಹನದಲ್ಲಿ ವೆಂಕಟೇಶ್ ಪ್ರಸಾದ್ ಅವರ ಮೂಲಕ 5 ಕೋಟಿ ರೂ., 2 ಕೋಟಿ ರೂ.ಗಳನ್ನು ಕಳುಹಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಎರಡು ವಿಭಿನ್ನ ಏಜೆನ್ಸಿಗಳು ಈ ಬಗ್ಗೆ ಕೆಲಸ ಮಾಡಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಐಟಿ ಇಲಾಖೆಯು ಯಾವುದೇ ಉಲ್ಲಂಘನೆಗಳೂ ಕಂಡುಹಿಡಿದಿಲ್ಲ, ಆದರೆ ಚುನಾವಣಾ ನಿಯಮಗಳ ಪ್ರಕಾರ ಉಲ್ಲಂಘನೆಯಾಗಿದೆ. ಆದ್ದರಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT