ರಾಜ್ಯ ಕಾಂಗ್ರೆಸ್ ನಾಯಕರಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ  
ರಾಜ್ಯ

ಕೇಂದ್ರದ ಬರ ಪರಿಹಾರ ಮೊತ್ತ ಅತ್ಯಲ್ಪ,ಬಿಜೆಪಿಯಿಂದ ಕರ್ನಾಟಕಕ್ಕೆ ಅನ್ಯಾಯ': ಸಿಎಂ-ಡಿಸಿಎಂ ಸೇರಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ

ಬೆಂಗಳೂರು: ರಾಜ್ಯದ ಬರಿ ಪರಿಹಾರ ವಿತರಣೆಗೆ ಸರ್ಕಾರ ಮಾಡಿದ್ದ ಬೇಡಿಕೆಗೆ ಅನುಸಾರವಾಗಿ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇದು ರಾಜ್ಯದ ಬೇಡಿಕೆಯನ್ನು ಪೂರೈಸಲು ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಇಂದು ಭಾನುವಾರ ಮತ್ತೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಬಹಳ ಕಡಿಮೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ರಾಜ್ಯ ಸಚಿವ ಸಂಪುಟ ಸದಸ್ಯರು, ಶಾಸಕರು ಬೆಳಗ್ಗೆಯೇ ಪ್ರತಿಭಟನೆ ನಡೆಸಿದರು.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಮೇ 7ರಂದು ನಡೆಯಲಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಲು ನಿನ್ನೆ ರಾತ್ರಿಯೇ ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ಬೆಳಗಾವಿಯಲ್ಲಿ ಪ್ರಚಾರ ಆರಂಭವಾಗಲಿದೆ. ಈ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿ ಪ್ರಧಾನಿಯವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಬರ ಪರಿಹಾರ ಮೊತ್ತ ಬಿಡುಗಡೆಯಲ್ಲಿ ಕರ್ನಾಟಕ ಜನತೆಗೆ ಮೋಸ ಮಾಡಿದ ಬಿಜೆಪಿಗೆ ಧಿಕ್ಕಾರ...ಧಿಕ್ಕಾರ, ರೈತರಿಗೆ ಕಡಿಮೆ ಪರಿಹಾರ ಕೊಟ್ಟ ಬಿಜಪಿಗೆ ಧಿಕ್ಕಾರ ಎಂದು ಭಿತ್ತಿ ಫಲಕಗಳನ್ನು ಪ್ರದರ್ಶಿಸಿ, ಚೊಂಬು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು.

ಗೋ ಬ್ಯಾಕ್...ಗೋ ಬ್ಯಾಕ್ ಮೋದಿ ಗೋ ಬ್ಯಾಕ್ ಎಂದು ಕೂಗಿದರು. ಬಿಜೆಪಿ ಸುಳ್ಳಿನ ಲೂಟಿ ಸರ್ಕಾರ ಎಂದರು.

ಈ ವೇಳೆ ಕೈಯಲ್ಲಿ ಚೊಂಬು ಹಿಡಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಒಂದು ವಾರದಲ್ಲಿ ಕೇಂದ್ರದ ತಂಡ ಬರಬೇಕು, ವೀಕ್ಷಣೆ ಮಾಡಿ ವರದಿ ಕೊಡಬೇಕು, ವರದಿ ಕೊಟ್ಟ ನಂತರ ಒಂದು ತಿಂಗಳಲ್ಲಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕಾನೂನಿನಲ್ಲಿದೆ. ನಾವು ಅನಿವಾರ್ಯವಾಗಿ ಕೇಂದ್ರದ ವಿಳಂಬ ನೀತಿ ಕಂಡು ಸುಪ್ರೀಂ ಕೋರ್ಟ್ ಗೆ ಹೋಗಬೇಕಾಯಿತು.

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಎನ್ ಡಿಆರ್ ಎಫ್ ನಿಂದ ಪರಿಹಾರ ಕೊಡಬೇಕಾಗಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ನಾವು ಭಿಕ್ಷೆ ಕೇಳುತ್ತಿಲ್ಲ, ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬರಗಾಲದಿಂದ ನಷ್ಟ ಆಗಿದೆ. 35 ಸಾವಿರ ಕೋಟಿಗೂ ಹೆಚ್ಚು ಬೆಲೆಯ ಬೆಳೆ ನಷ್ಟವಾಗಿದೆ. ನಾವು 18,172 ಕೋಟಿ ಎನ್ ಡಿಆರ್ ಎಫ್ ನಿಯಮ ಪ್ರಕಾರ ಕೇಳಿದೆವು. ಆದರೆ ಸಿಕ್ಕಿದ್ದು ಕೇವಲ 3,454 ಕೋಟಿ ರೂಪಾಯಿ ಶೇಕಡಾ 19ಕ್ಕಿಂತ ಕಡಿಮೆ ನೀಡಿದ್ದಾರೆ. ಕೇಂದ್ರದಿಂದ ಬಂದಿರುವ ಪರಿಹಾರ ಕಡಿಮೆಯಾಗಿದೆ ಎಂದು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ, ರೈತರಿಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನ್ಯಾಯ ಮಾಡುತ್ತಿದ್ದಾರೆ, ಕರ್ನಾಟಕ ಪ್ರತಿವರ್ಷ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ತೆರೆಗೆ ಪಾವತಿಸುತ್ತೇವೆ, ಹೀಗಿರುವಾಗ ರಾಜ್ಯಕ್ಕೆ ಅನ್ಯಾಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಪಾದಯಾತ್ರೆ: ಇಲ್ಲಿ ಪ್ರತಿಭಟನೆ ಮಾಡಿದ ನಂತರ ದೇವರಾಜ ಅರಸು ಪ್ರತಿಮೆ ಬಳಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಜನತೆಗೆ ಸುಳ್ಳು ಹೇಳುತ್ತಾ ದ್ರೋಹ ಮಾಡುತ್ತಿದೆ ಎಂದರು. ನರೇಗಾ ಅಡಿ 150 ದಿನಗಳ ಕೂಲಿಯನ್ನು ಕಾರ್ಮಿಕರಿಗೆ ನೀಡಿಲ್ಲ, ಮೋದಿಯವರು ಎಲ್ಲಾ ವಿಷಯದಲ್ಲಿ ನಮಗೆ ಚೊಂಬು ಕೊಟ್ಟಿದ್ದಾರೆ ಎಂದು ಟೀಕಿಸಿದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ 50 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ. ಅನೇಕರಿಗೆ ಉದ್ಯೋಗ ಸಿಕ್ಕಿಲ್ಲ. ನರೇಗಾ ವಿಚಾರದಲ್ಲಿ ಕೂಲಿ ಮಾಡಲು ಹಣ ಕೊಟ್ಟಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಸೆಪ್ಟೆಂಬರ್ ತಿಂಗಳಿನಿಂದ ಆಗಿರುವ ನಷ್ಟವನ್ನು ಸೇರಿಸಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT