ಬೆಂಗಳೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಇನ್ಫೋಸಿಸ್‍ಗೆ ನೀಡಿದ್ದ 32,403 ಕೋಟಿ ರೂಪಾಯಿಗಳ ಜಿಎಸ್‍ಟಿ ಡಿಮ್ಯಾಂಡ್ ನೋಟಿಸ್'ನ್ನು ಅಧಿಕಾರಿಗಳು ಹಿಂಪಡೆದಿದ್ದು, ಕೇಂದ್ರೀಯ ಜಿಎಸ್'ಟಿ ಗುಪ್ತಚರ ವಿಭಾಗಕ್ಕೆ ಉತ್ತರ ಕೊಡಬೇಕೆಂದು ಇನ್ಫೋಸಿಸ್'ಗೆ ಸೂಚನೆ ನೀಡಿದ್ದಾರೆ.
ರಾಜ್ಯ ಸರ್ಕಾರ, ತಾನು ನೀಡಿರುವ ಜಿಎಸ್ ಟಿ ನೋಟಿಸನ್ನು ಹಿಂಪಡೆದಿದೆ ಎಂದು ಖುದ್ದು ಇನ್ಫೋಸಿಸ್ ಸಂಸ್ಥೆಯೇ ಪ್ರಕಟಿಸಿದೆ.
DGGI ಅಧಿಕಾರಿಗಳು ನೋಟಿಸ್ ಹಿಂಪಡೆದಿದ್ದು, 32,000 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಆರೋಪಗಳ ಬಗ್ಗೆ ಕೇಂದ್ರೀಯ ಜಿಎಸ್ ಟಿ ಗುಪ್ತಚರ ವಿಭಾಗದ ಮಹಾ ನಿರ್ದೇಶಕರಿಗೆ ವಿವರಣೆ ಕೊಡಬೇಕು ಎಂದು ಸೂಚಿಸಿದ್ದಾರೆ ಎಂದು ಇನ್ಫೋಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದ ಅಧಿಕಾರಿಗಳಿಗೊಂದಿಗೆ ಮಾತುಕತೆ ನಡೆಸಿರುವ ಕೇಂದ್ರೀಯ ಜಿಎಸ್'ಟಿ ಗುಪ್ತಚರ ವಿಭಾಗ ನೋಟಿಸ್ ನ್ನು ವಾಪಸ್ ಪಡೆದುಕೊಂಡಿದ್ದು, ಮಾಹಿತಿ ನೀಡುವಂತೆ ಇನ್ಫೋಸಿಸ್'ಗೆ ಸೂಚನೆ ನೀಡಿದೆ.
ಜು. 31ರಂದು, ಇನ್ಫೋಸಿಸ್ ಗೆ ನೋಟಿಸ್ ಕಳುಹಿಸಿದ್ದ ಕೇಂದ್ರೀಯ ಜಿಎಸ್'ಟಿ ಗುಪ್ತಚರ ವಿಭಾಗ, 32,000 ಕೋಟಿ ರೂ.ಗಳ ಜಿಎಸ್ ಟಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಹಾಗಾಗಿ, ಕೂಡಲೇ ತೆರಿಗೆಯನ್ನು ಕಟ್ಟಬೇಕೆಂದು ಸೂಚಿಸಿತ್ತು. ಅಲ್ಲದೆ, ಈ ತೆರಿಗೆಯು ಇನ್ಫೋಸಿಸ್ ಕಂಪನಿಯು ವಿದೇಶಗಳಲ್ಲಿನ ತನ್ನ ಶಾಖೆಗಳಿಂದ ಅಲ್ಲಿನ ಕಂಪನಿಗಳಿಗೆ ನೀಡುತ್ತಿರುವ ಸಾಫ್ಟ್ ವೇರ್ ಸೇವೆಗಳ ಮೇಲೆ ವಿಧಿಸಲಾಗುವ ತೆರಿಗೆಯಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಆದರೆ, ಅದನ್ನು ಖಡಾಖಂಡಿತವಾಗಿ ತಳ್ಳಿಹಾಕಿದ ಇನ್ಫೋಸಿಸ್, ವಿದೇಶಿಗಳಲ್ಲಿ ನೀಡುವ ಸೇವೆಗಳ ಮೇಲಿನ ಜಿಎಸ್ ಟಿಯನ್ನು ಈಗಾಗಲೇ ಕೇಂದ್ರ ಸರ್ಕಾರವೇ ರದ್ದುಗೊಳಿಸಿದೆ. ಇತ್ತೀಚೆಗಷ್ಟೇ ಈ ಕುರಿತಂತೆ ಮಾರ್ಗಸೂಚಿಯನ್ನು ಕೇಂದ್ರೀಯ ತೆರಿಗೆ ಇಲಾಖೆ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ವಿದೇಶದ ಕಂಪನಿಗಳಿಗೆ ನೀಡಲಾಗುವ ಸಾಫ್ಟ್ ವೇರ್ ಸೇವೆಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ಉತ್ತರಿಸಿತ್ತು.
ಸರಕು ಮತ್ತು ಸೇವಾ ತೆರಿಗೆ, ಕೇಂದ್ರೀಯ ಅಬಕಾರಿ ಸುಂಕ ಮತ್ತು ಸೇವಾ ತೆರಿಗೆಯ ಉಲ್ಲಂಘನೆಗೆ ಸಂಬಂಧಿಸಿದ ವಿಷಯಗಳ ಪರಿಶೀಲಿಸಲು DGGI ಅತ್ಯುನ್ನತ ಗುಪ್ತಚರ ಮತ್ತು ತನಿಖಾ ಸಂಸ್ಥೆಯಾಗಿದೆ.