ಬಿಡದಿ(ರಾಮನಗರ): ಮೈಸೂರು ಅಭಿವೃದ್ಧಿ ಪ್ರಾಧಿಕಾರ (MUDA) ನಿವೇಶನ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ರಾಮನಗರ ಜಿಲ್ಲೆಯ ಬಿಡದಿ ಮೂಲಕ ಸಾಗುತ್ತಿದೆ.
ನಿನ್ನೆ ಶನಿವಾರ ಬೆಂಗಳೂರಿನ ಕೆಂಗೇರಿಯಿಂದ ಪಾದಯಾತ್ರೆ ಆರಂಭಿಸಿದ ನಾಯಕರು ಬಿಡದಿಯಲ್ಲಿ ರಾತ್ರಿ ವಿಶ್ರಾಂತಿ ಪಡೆದರು. ಇಂದು ಬೆಳಗ್ಗೆ ಬಿಡದಿಯಿಂದ 2ನೇ ದಿನದ ಮೈಸೂರು ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆ ಇಂದು ಸುಮಾರು 20 ಕಿ.ಮೀ. ದೂರ ಸಾಗಲಿದೆ. ನಾಯಕರು ಮಾಯಗಾನಹಳ್ಳಿಯಲ್ಲಿ ಕಾಫಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ರಾಮನಗರದ ಪದ್ಮಾವತಿ ದೇವಸ್ಥಾನದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸುವರು. ರಾತ್ರಿ ಕೆಂಗಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಇಂದಿನ ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಮಟೆ ಬಾರಿಸುವುದರ ಮೂಲಕ ಎರಡನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.ಬಿಜೆಪಿ ಎಸ್ಸಿ ಮೋರ್ಚಾಗೆ ಎರಡನೇ ದಿನದ ಪಾದಯಾತ್ರೆ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.
ವಿರೋಧ ಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಸವಾಲು ನೀಡಿ, ಇವತ್ತು ಆಡಳಿತ ಪಕ್ಷ ವಿರೋಧ ಪಕ್ಷಕ್ಕೆ ಪ್ರಶ್ನೆ ಹಾಕುತ್ತಿರುವುದು ಮೂರ್ಖತನದ ಪರಮಾವಧಿ. ಆ ಕೆಲಸವನ್ನು ಅಧಿಕಾರ ಹೊಂದಿರುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ.
ಇವತ್ತು ಆಡಳಿತ ಪಕ್ಷದ ಪರಿಸ್ಥಿತಿ ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬ ರೀತಿಯಲ್ಲಿ ಆಗಿದೆ. ಮುಖ್ಯಮಂತ್ರಿಗಳು ಸೇರಿದಂತೆ ಮಂತ್ರಿಮಂಡಲ, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೀಗಿರುವಾಗ ಈ ರಾಜ್ಯದ ಸಾಮಾನ್ಯ ಜನತೆ ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ, ಭ್ರಷ್ಟಾಚಾರದಿಂದ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಸರ್ಕಾರದ ದುರಾಡಳಿತದಿಂದ ದೊಡ್ಡ ದೊಡ್ಡ ಕಂಪೆನಿಗಳು ರಾಜ್ಯ ಬಿಟ್ಟು ಹೋಗುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.