ಬೆಂಗಳೂರು: ಮೃತ ಪಿಎಸ್‌ಐ ಪರಶುರಾಮ್ ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡುವುದಕ್ಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪಿಎಸ್‌ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕ ಮೇಲೆ ಆಪಾದನೆ ಕೇಳಿ ಬಂದಿದೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ ಎಂದು ಇಲಾಖೆ ಹೇಳಿದೆ ಎಂದು ತಿಳಿಸಿದ್ದಾರೆ. ಅವರು ಯಾವುದೇ ಸೂಸೈಡ್ ನೋಟ್ ಬರೆದಿಲ್ಲ. ವರ್ಗಾವಣೆ ವಿಚಾರದಿಂದ ಬೇಸರಗೊಂಡಿರುವುದಾಗಿ ಅವರ ಪತ್ನಿ ಹೇಳಿದ್ದಾರೆ. ಆ ಅಂಶವನ್ನೂ ತನಿಖೆಯ ವೇಳೆ ಪರಿಶೀಲಿಸಲಾಗುವುದು ಎಂದರು.
ಆಡಳಿತ ಪಕ್ಷದ ಶಾಸಕರು ಶಾಮೀಲಾಗಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಾರೆ ಎಂದರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತೆ. ಪರಶುರಾಮ್ ಪತ್ನಿಗೆ ಇಲಾಖೆಯಲ್ಲಿ ಕೆಲಸ ಪರಿಹಾರ ಕೊಡೋಕೆ ಸರ್ಕಾರ ತೀರ್ಮಾನ ಸರ್ಕಾರ ಮಾಡಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರಾಮಾಣಿಕ ದಲಿತ ಅಧಿಕಾರಿಯೊಬ್ಬರ ಜೀವವನ್ನೇ ಬಲಿತೆಗೆದುಕೊಂಡಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ವಾಲ್ಮೀಕಿ ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಶೇಖರನ್ ಅವರ ಸಾವಿಗೆ ಕಾರಣರಾದ ಕಾಂಗ್ರೆಸ್ ಸರಕಾರ ಇದೀಗ ಮತ್ತೊಬ್ಬ ಅಧಿಕಾರಿ ಪರಶುರಾಮ್ ಅವರ ವರ್ಗಾವಣೆಗೆ ಲಂಚ ಕೇಳುವ ಮೂಲಕ ಹತ್ಯೆ ಮಾಡಿದೆ ಎಂದು ದೂರಿದ್ದಾರೆ.
ಒತ್ತಡ ಮತ್ತು ಮಾನಸಿಕ ಕಿರುಕುಳದಿಂದ ಹೃದಯಾಘಾತದಿಂದ ಸಾವನ್ನಪ್ಪಿದ ಯಾದಗಿರಿ ಪಿಎಸ್‌ಐ ಪರಶುರಾಮ್ ಸಾವಿಗೆ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಹಾಗೂ ಅವರ ಪುತ್ರನೇ ಕಾರಣ ಎಂದು ಬಿಜೆಪಿ ಮುಖಂಡ, ಪತ್ನಿ ಹಾಗೂ ಕುಟುಂಬಸ್ಥರು ಗಂಭೀರ ಆರೋಪ ಮಾಡಿ ಲಿಖಿತ ದೂರು ನೀಡಿದ್ದಾರೆ.