ಬೆಂಗಳೂರು: ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.
ಆಗಸ್ಟ್ 2 ರಂದು ಬೆಂಗಳೂರಿನ ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ಮುಂಜಾನೆ 5 ಗಂಟೆ ವೇಳೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದ. ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಆಕೆ ಬಳಿ ಬಂದು ಆಕೆಯನ್ನು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟಿದ್ದಾನೆ.
ಈ ವೇಳೆ ಮಹಿಳೆ ಆತನಿಂದ ತಪ್ಪಿಸಿಕೊಂಡು ಮುಂದೆ ಹೋಗಿದ್ದು, ಮತ್ತೆ ಆಕೆಯನ್ನು ಹಿಂಬಾಲಿಸಿದ ಆತ ಮತ್ತೆ ಆಕೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಕೂಡಲೇ ಆತ ಆಕೆಯನ್ನು ಬಿಟ್ಟು ಓಡಿ ಹೋಗಿದ್ದ. ಇವಿಷ್ಟೂ ಘಟನೆ ಮನೆಯೊಂದಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಇದೇ ವಿಡಿಯೋ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಆರೋಪಿ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿದ್ದ ಬೆಂಗಳೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಅನುಸರಿಸಿ, ಸಂತ್ರಸ್ತೆಯನ್ನು ಪತ್ತೆ ಹಚ್ಚಿ ದೂರು ದಾಖಲಿಸಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ಘಟನೆ ಸಂಭವಿಸಿದಾಗ ಮಹಿಳೆಯು ಬೆಳಗಿನ ವಾಕಿಂಗ್‌ಗೆ ಹೋಗಲು ರಸ್ತೆ ತುದಿಯಲ್ಲಿ ತನ್ನ ನೆರೆಹೊರೆಯವರಿಗಾಗಿ ಮನೆಯ ಮುಂದೆ ಕಾಯುತ್ತಿದ್ದರು. ಈ ವೇಳೆ, ಅಪರಿಚಿತ ವ್ಯಕ್ತಿ ಅಕೆಯನ್ನು ಹಿಡಿದು ಕಿರುಕುಳ ನೀಡಿದ್ದಾನೆ. ಮಹಿಳೆ ಕಿರುಚಿದಾಗ, ಆತ ಪರಾರಿಯಾಗಿದ್ದ.
ಆಗಸ್ಟ್ 4 ರಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ, ಸೆಕ್ಷನ್ 74 (ಹೆಣ್ಣಿನ ಗೌರವಕ್ಕೆ ಧಕ್ಕೆ ತರುವುದು), 75 (ಲೈಂಗಿಕ ಕಿರುಕುಳ), 78 (ಹಿಂಬಾಲಿಸುವಿಕೆ), 79 (ಪದ, ಮಹಿಳೆಯ ಗೌರವ ಅವಮಾನಿಸುವ ಉದ್ದೇಶದಿಂದ ಸನ್ನೆ ಅಥವಾ ಕ್ರಿಯೆ) ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) 126ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಹೇಳಿದ್ದಾರೆ.
ಆರೋಪಿ ಕಾರು ಚಾಲಕನ ಬಂಧನ
"ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಲೇ ಸೋಮವಾರ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿ ಕ್ಯಾಬ್ ಚಾಲಕ ಇದೇ ರಸ್ತೆಯಲ್ಲಿ ಕಾರ್ಪೊರೇಟ್ ಉದ್ಯೋಗಿಯೊಬ್ಬರನ್ನು ಡ್ರಾಪ್ ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಮಹಿಳೆಯನ್ನು ನೋಡಿ ಆಕೆಗೆ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ (ದಕ್ಷಿಣ) ಲೋಕೇಶ್ ಜಗಲಾಸರ್ ಹೇಳಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾಗಿರುವ ಮಹಿಳೆ
ಇನ್ನು ಮನೆ ಮುಂದೆ ಸೇಫ್ ಎಂದು ವಾಕಿಂಗ್ ಮಾಡುತ್ತಿದ್ದ ಮಹಿಳೆ ಈ ಘಟನೆ ಬಳಿಕ ತೀವ್ರ ಆತಂಕ ಮತ್ತು ಆಘಾತಗೊಂಡಿದ್ದಾರೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.