ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಸುರಿದ ಭಾರೀ ಮಳೆಗೆ ಬೃಹತ್ ಗಾತ್ರದ ಮರದ ಕೊಂಬೆಯೊಂದು ಉರುಳಿಬಿದ್ದು ನಾಲ್ವರು ಮಕ್ಕಳು ಸೇರಿ 6 ಮಂದಿ ಗಾಯಗೊಂಡಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಸುಮಾರಿಗೆ ಮಾರುತಿ ಸೇವಾನಗರದಲ್ಲಿ ಘಟನೆ ಸಂಭವಿಸಿದೆ. ಘಟನೆ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಾಣಿಕ್ಯವೇಲ್ ಎಂಬುವವರಿಗೆ ಗಂಭೀರವಾದ ಗಾಯಗಳಾಗಿವೆ.
ಗಾಯಗೊಂಡಿರುವ ಮತ್ತೋರ್ವರನ್ನು ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಮಹಿಳೆ ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆಂದು ವರದಿಗಳು ತಿಳಿಸಿವೆ.
ಘಟನೆಯಲ್ಲಿ ನಾಲ್ವರು ಶಾಲಾ ಮಕ್ಕಳಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿಲ್ಲ, ಗಾಯಗಳ ಸ್ವರೂಪ ತೀವ್ರವಾಗಿಲ್ಲದಿರುವುದರಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಾಧಿಕಾರಿ ತ್ರಿಜಾ ಮಾಹಿತಿ ನೀಡಿದ್ದಾರೆ.
ವಿಜಯಲಕ್ಷ್ಮಿಅವರು ಇಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮರದ ಕೊಂಬೆ ಬಿದ್ದಿದೆ. ಈ ವೇಳೆ ಮಹಿಳೆಯ ಬಲ ತೊಡೆಯ ಮೂಳೆ ಮುರಿತಗೊಂಡಿದೆ. ಆದರೆ, ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇತರೆ ಇಬ್ಬರು ಮಕ್ಕಳಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಗಾಯಾಗಳುಗಳ ಸಂಬಂಧಿಕರೊಂದಿಗೂ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಮಳೆ ಬಂದಾಗ ನಾನು ಒಂದು ಗಮನಿಸಿದ್ದೀನಿ. ಬೆಂಗಳೂರಿನಲ್ಲಿ ಎಷ್ಟೇ ರಸ್ತೆ ಗುಂಡಿ ಮುಚ್ಚಿದ್ದರೂ ಮತ್ತೆ ಸೃಷ್ಟಿ ಆಗುತ್ತಲೇ ಇರುತ್ತದೆ. ರಸ್ತೆ ಬದಿಗಳಲ್ಲಿ ಇರುವ ರೀಟೈನಿಂಗ್ ವಾಲ್‌ಗಳನ್ನು ಸರಿ ಮಾಡಿಸಲು ಸೂಚನೆ ನೀಡಿದ್ದೇನೆ. ರಸ್ತೆ ಪಕ್ಕ ಫುಟ್‌ಪಾತ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮರ ತೆರವಿಗೆ ಸ್ಥಳೀಯರು ಮನವಿ ಮಾಡಿದ್ದರೂ ತೆರವು ಮಾಡಲಿಲ್ಲ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿ, ಈ ವಿಚಾರ ಗಮನಕ್ಕೆ ಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಜರುಗಿಸುತ್ತೇವೆ. ಗಾಯಾಳುಗಳ ಎಲ್ಲ ಖರ್ಚು ವೆಚ್ಚಗಳನ್ನು ಬಿಬಿಎಂಪಿ ನಿರ್ವಹಿಸಲಿದೆ ಎಂದರು.