ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪರ್ಯಾಯ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದಾಖಲಾಗಿರುವ ಎರಡು ಖಾಸಗಿ ದೂರುಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಮುಂದಿನ ಮಂಗಳವಾರಕ್ಕೆ ಮುಂದೂಡಿದೆ.
ಇಬ್ಬರು ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಟಿ ಜೆ ಅಬ್ರಹಾಂ ಅವರ ಖಾಸಗಿ ದೂರನ್ನು ಅಂಗೀಕರಿಸುವ ಬಗ್ಗೆ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಪ್ರಕರಣವನ್ನು ಆಗಸ್ಟ್ 20ಕ್ಕೆ ಮುಂದೂಡಿದ ನ್ಯಾಯಾಲಯ, ಅಬ್ರಹಾಂ ಅರ್ಜಿಯನ್ನು ಆಗಸ್ಟ್ 21ಕ್ಕೆ ಕೈಗೆತ್ತಿಕೊಳ್ಳಲಿದೆ.
ಮೈಸೂರಿನ ಕೆಸರೂರಿನಲ್ಲಿ ಮೂರು ಎಕರೆ 16 ಗುಂಟೆ ಕೃಷಿ ಭೂಮಿ ಸ್ವಾಧೀನಕ್ಕೆ ಪರ್ಯಾಯವಾಗಿ ಸಿದ್ದರಾಮಯ್ಯ ಅವರ ಪತ್ನಿ ಮೇಲ್ಮಟ್ಟದ ಪ್ರದೇಶದಲ್ಲಿ ನಿವೇಶನ ಪಡೆದಿರುವ ಮುಡಾ ಹಗರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಸಿದ್ದರಾಮಯ್ಯ ಈ ಆರೋಪಗಳನ್ನು ಆಧಾರ ರಹಿತ ಎಂದು ತಳ್ಳಿ ಹಾಕಿದ್ದಾರೆ.
ಈ ವಿಷಯವಾಗಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕೂಡ ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದು, ತಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲು ಏಕೆ ಅನುಮತಿ ನೀಡಬಾರದು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಮುಖ್ಯಮಂತ್ರಿಗೆ ನೀಡಿದ್ದ ನೋಟಿಸ್ ಅನ್ನು ರಾಜ್ಯಪಾಲರು ಹಿಂಪಡೆಯುವಂತೆ ಒತ್ತಾಯಿಸಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.