ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ರೈಲು ನಿಲ್ದಾಣದಲ್ಲಿ ಭಾರತೀಯ ಅಂಚೆ ಇಲಾಖೆಯ ಗುತ್ತಿಗೆ ಕೆಲಸದಲ್ಲಿದ್ದ ಇಬ್ಬರು ಉದ್ಯೋಗಿಗಳ ಸಮಯ ಪ್ರಜ್ಞೆ ಮತ್ತು ತ್ವರಿತ ಕಾರ್ಯದಿಂದ ಪುಟ್ಟ ಬಾಲಕನ ಜೀವ ಉಳಿದಿದೆ.
ಭಾನುವಾರ ಸಂಜೆ 6.15 ಕ್ಕೆ ಬಾಲಕನೊಬ್ಬ ಕೈತಪ್ಪಿದ ತನ್ನ ಬಲೂನ್ ಬೆನ್ನಟ್ಟಿ ಹೋಗಿ ಹಳಿ ಮೇಲೆ ಜಿಗಿದಿದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಇದೇ ಸಮಯದಲ್ಲಿ, ರೈಲು ಬಾಲಕನತ್ತ ಚಲಿಸಲು ಪ್ರಾರಂಭಿಸಿತು. ತಕ್ಷಣ ಎಚ್ಚೆತ್ತುಕೊಂಡ ಅಂಚೆ ಇಲಾಖೆಯ ದಿನಗೂಲಿ ನೌಕರರಾದ ಉಮೇಶ್ ಮತ್ತು ಮುಕುಂದನ್ ಅವರು ಪ್ಲಾಟ್‌ಫಾರ್ಮ್ 3ರಲ್ಲಿ ಅಂಚೆ ಚೀಲಗಳನ್ನು ಲೋಡ್ ಮಾಡುವ ಕೆಲಸ ಬಿಟ್ಟು ಹಳಿಗೆ ಜಿಗಿದು ಬಾಲಕನ ಪ್ರಾಣ ರಕ್ಷಿಸಿದ್ದಾರೆ.
ಟ್ರ್ಯಾಕ್‌ಗಳಿಗೆ ಜಿಗಿದ ಉಮೇಶ್ ಮತ್ತು ಮುಕುಂದನ್ ಅವರು ಬಾಲಕನತ್ತ ಬರುತ್ತಿದ್ದ ಬೆಂಗಳೂರು-ಮಾರಿಕುಪ್ಪಂ ಎಂಇಎಂಯು ಪ್ಯಾಸೆಂಜರ್ ರೈಲಿನಿ ಒಂದು ಬೋಗಿ ಹತ್ತಿ ಎಚ್ಚರಿಕೆಯ ಚೈನ್ ಎಳೆದಿದ್ದಾರೆ. ನಂತರ ಬಾಲಕನನ್ನು ಟ್ರ್ಯಾಕ್ ನಿಂದ ರಕ್ಷಿಸಲಾಗಿದೆ.
“ಹುಡುಗನೊಬ್ಬ ಬಲೂನ್ ಬೆನ್ನಟ್ಟಿ ಟ್ರ್ಯಾಕ್‌ನಲ್ಲಿ ಓಡುತ್ತಿರುವುದನ್ನು ನಾವು ಗಮನಿಸಿದೆವು. ಅದೇ ಸಮಯಕ್ಕೆ ಮಾರಿಕುಪ್ಪಂ ಮೆಮು ಚಲಿಸತೊಡಗಿತು. ನಾವು ಹಳಿಗಳ ಮೇಲೆ ಹಾರಿ ಒಂದು ಬೋಗಿಗೆ ಹತ್ತಿ ಅಲಾರಾಂ ಚೈನ್ ಎಳೆದೆವು. ಹೀಗಾಗಿ ರೈಲ ತಕ್ಷಣ ನಿಲ್ಲಿಸಿತು ಎಂದು ಉಮೇಶ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನಾವು ಹೇಗಾದರೂ ಮಾಡಿ ಹುಡುಗನನ್ನು ರಕ್ಷಿಸಬೇಕಾಗಿತ್ತು. ಹೀಗಾಗಿ ತಕ್ಷಣ ರೈಲಿನ ಒಂದು ಬೋಗಿ ಹತ್ತಿ ತಕ್ಷಣ ಚೈನ್ ಎಳೆದೆವು ಎಂದು ಮುಕುಂದನ್ ಅವರು TNIE ಗೆ ಹೇಳಿದ್ದಾರೆ.
“ಅಂಚೆ ಚೀಲಗಳನ್ನು ಆಫ್-ಲೋಡ್ ಮಾಡುತ್ತಿದ್ದೆವು. ನಾನು ರೈಲ್ವೆ ನಿಲ್ದಾಣದಲ್ಲಿ 14 ವರ್ಷ ಮತ್ತು ಉಮೇಶ್ 10 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ನಾವು ಬಾಲಕ ಅಪಾಯದಲ್ಲಿರುವುದನ್ನು ನೋಡಿ ತಕ್ಷಣ ಆತನನ್ನು ಉಳಿಸಲು ಧಾವಿಸಿದೆವು. ದಯವಿಟ್ಟು ಈ ಸಣ್ಣ ಕೆಲಸಕ್ಕೆ ನಮ್ಮನ್ನು ಹೀರೋಗಳನ್ನಾಗಿ ಮಾಡಬೇಡಿ ಎಂದು ಎಂದು ಮುಕುಂದನ್ ತಿಳಿಸಿದ್ದಾರೆ.