ಕಲಬುರಗಿ: ಎಂಎ ಇಂಗ್ಲಿಷ್ನಲ್ಲಿ ಹೆಚ್ಚಿನ ಅಂಕ ಗಳಿಸಿದ್ದ ವಿದ್ಯಾರ್ಥಿನಿ ರೋಷಿನಿ ಅವರಿಗೆ ಚಿನ್ನದ ಪದಕ ಘೋಷಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಕೊನೆ ಗಳಿಯಲ್ಲಿ ಪದಕ ನೀಡಲು ನಿರಾಕರಿಸಿದ್ದು, ಪದಕ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿ ಕಣ್ಣೀರು ಹಾಕಿರುವ ಘಟನೆ ಸೋಮವಾರ ನಡೆದಿದೆ.
ಬೀದರ್ ಜಿಲ್ಲೆಯ ಬಾಲ್ಕಿ ಸಿಬಿ ಕಾಲೇಜಿನ ವಿದ್ಯಾರ್ಥಿನಿ ರೋಷಿನಿ ಮಾಳಗೆ ಪದಕ ವಂಚಿತರಾಗಿ ಕಣ್ಣೀರಿಟ್ಟಿದ್ದಾರೆ. ರೋಶಿನಿ ಎಂಎ ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದು ಚಿನ್ನದ ಪದಕ ಗಿಟ್ಟಿಸಿದ್ದಾಳೆಂದು ಭಾಲ್ಕಿಯ ಸಿಬಿ ಕಾಲೇಜಿನ ಪ್ರಾಚಾರ್ಯರಿಗೆ ಗುವಿವಿ ಮೌಲ್ಯಮಾಪನ ವಿಭಾಗ ಪತ್ರ ಬರೆದು ಹೇಳಿತ್ತಲ್ಲದೆ, ಆಕೆಯ ಭಾವಚಿತ್ರ ಮತ್ತು ವಿಳಾಸದ ಮಾಹಿತಿ ಕೇಳಿತ್ತು.
ವಿವಿ ಮೌಲ್ಯಮಾಪನ ಕುಲಸಚಿವರ ಸೂಚನೆಯಂತೆ ಕಾಲೇಜಿನ ಪ್ರಾಚಾರ್ಯರು ರೋಶನಿಗೆ ಸುದ್ದಿ ತಿಳಿಸಿದ್ದಲ್ಲದೆ, ಆಕೆಯ ಭಾವಚಿತ್ರ, ವಿವರಗಳನ್ನೆಲ್ಲಾ ವಿವಿ ಪರೀಕ್ಷಾಂಗ, ಮೌಲ್ಯಮಾಪನ ವಿಭಾಗಕ್ಕೆ ರವಾನಿಸಿತ್ತು. ಆ.12ರಂದು ಘಟಿಕೋತ್ಸವ ದಿನಾಂಕ ನಿಗದಿಯಾಗಿದ್ದರಿಂದ ಚಿನ್ನದ ಪದಕ ಪಡೆಯಲು ಬಂಧಗಳೊಂದಿಗೆ ರೋಷಿನಿ ಆಗಮಿಸಿದ್ದರು.
ಈ ವೇಳೆ ಪದಕ ವಿಜೇತರ ಪಟ್ಟಿಯಲ್ಲಿ ಈಕೆಯ ಹೆಸರಿನ ಬದಲು ಮತ್ತೊಬ್ಬರ ಹೆಸರು ಕೇಳಿಬಂದಿದೆ. ಈ ಬಗ್ಗೆ ರೋಷಿನಿ ವಿಚಾರಿಸಿದಾಗ ತಮಗಿಂತ ಮತ್ತೋರ್ವ ವಿದ್ಯಾರ್ಥಿನಿ ಹೆಚ್ಚಿನ ಅಂಕ ಗಳಿಸಿರುವುದು ತಿಳಿದುಬಂದಿದೆ. ತಮ್ಮಿಂದಾಗ ಯಡವಟ್ಟು ಕುರಿತು ವಿಷಾದ ಪತ್ರವನ್ನು ಕಾಲೇಜಿಗೆ ಕಳುಹಿಸಿರುವುದಾಗಿಯೂ ತಿಳಿಸಿದ್ದಾರೆ.
ವಿಷಾದ ಪತ್ರವನ್ನು ಆ.8ರಂದೇ ಕಾಲೇಜಿಗೆ ಕಳುಹಿಸಲಾಗಿದೆ ಎಂದು ವಿವಿ ಹೇಳಿದೆ. ಆದರೆ, ಆ.12ರಂದು ಪತ್ರ ಬಂದಿರುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.