ಬೆಂಗಳೂರು: ಪಾರದರ್ಶಕತೆ ತರಲು ಮತ್ತು ಸಿಬ್ಬಂದಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಲೋಕಾಯುಕ್ತ ಕಚೇರಿಯು ಇ-ಆಡಳಿತವನ್ನು ಅಳವಡಿಸಿಕೊಳ್ಳಲಿದೆ ಮತ್ತುಎಲ್ಲಾ ವಿಭಾಗಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಕಾಗದ ರಹಿತವಾಗಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು ಗುರುವಾರ ಹೇಳಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಭಾಷಣ ಮಾಡಿದ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರು, ಇ-ಕಾರ್ಯಾಲಯದ ನೆರವಿನಿಂದ ಇ-ಆಡಳಿತ ಅಳವಡಿಸಿಕೊಳ್ಳಲು ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ಹಂತದಲ್ಲಿ, ದೂರು ಸ್ವೀಕರಿಸುವ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಡಿಜಿಟಲೀಕರಣವನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು.
ಭ್ರಷ್ಟಾಚಾರ ನಿಗ್ರಹ ದಳದ ವಿಲೀನದ ನಂತರ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಲ ಹೆಚ್ಚಾಗಿದೆ ಎಂದು ನ್ಯಾಯಮೂರ್ತಿ ಪಾಟೀಲ್ ಹೇಳಿದರು.
ಎಲ್ಲಾ 1,247 ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸೇವಾ ವಿವರಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಇದಲ್ಲದೆ ಸಂಸ್ಥೆಯಲ್ಲಿನ ಅಧಿಕಾರಿಗಳಿಗೆ ಸಹಾಯಕ ಸಿಬ್ಬಂದಿ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ಒಂಬತ್ತು ಪ್ರಥಮ ದರ್ಜೆ ಸಹಾಯಕರು ಮತ್ತು 26 ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಲೋಕಸೇವಾ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಲು ಚಿಂತಿಸಲಾಗಿದೆ ಎಂದರು.
ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸಿದರು. ಮತ್ತೊಬ್ಬ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಮಾಣ ವಚನ ಬೋಧಿಸಿ, ಭ್ರಷ್ಟಾಚಾರ ತೊಲಗುವುದೇ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಎಂದು ಹೇಳಿದರು.