ಸಚಿವ ಎಂಬಿ ಪಾಟೀಲ್ 
ರಾಜ್ಯ

ಬೆಂಗಳೂರಿನಲ್ಲಿ ಎಂಜಿನಿಯರಿಂಗ್, ನಾವೀನ್ಯತೆ ಶ್ರೇಷ್ಠತಾ ಕೇಂದ್ರ ಸ್ಥಾಪನೆ: ಷೆರ್ವನ್‌ 8,300 ಕೋಟಿ ರೂ. ಹೂಡಿಕೆ

ಬೆಂಗಳೂರಿನಲ್ಲಿ ಷೆರ್ವನ್‌ ಶ್ರೇಷ್ಠತಾ ಕೇಂದ್ರದ ಸ್ಥಾಪನೆಯು ತಂತ್ರಜ್ಞಾನ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಆದ್ಯತೆಗಳಿಗೆ ಸೂಕ್ತವಾಗಿ ಹೊಂದಿಕೊಳ್ಳಲಿದೆ.

ಬೆಂಗಳೂರು: ಇಂಧನ ಪರಿಹಾರಗಳನ್ನು ನೀಡುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಷೆರ್ವನ್‌, ಬೆಂಗಳೂರಿನಲ್ಲಿ ತನ್ನ ಎಂಜಿನಿಯರಿಂಗ್ ಮತ್ತು ನಾವೀನ್ಯತೆ ಶ್ರೇಷ್ಠತಾ ಕೇಂದ್ರ (ಇಎನ್‌ಜಿಐಎನ್‌ಇ) ಸ್ಥಾಪಿಸಲು ರೂ. 8,300 ಕೋಟಿ ಹೂಡಿಕೆ ಮಾಡುವುದಾಗಿ ಶುಕ್ರವಾರ ಘೋಷಿಸಿತು.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆಗೆ ಷೆರ್ವನ್‌ ನಿಯೋಗವು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ಹೂಡಿಕೆ ಘೋಷಿಸಲಾಗಿದೆ. ಸಭೆಯಲ್ಲಿ ಷೆರ್ವನ್‌ ಇಂಡಿಯಾ ಮುಖ್ಯಸ್ಥ ಡಾ. ಅಕ್ಷಯ್‌ ಸಾಹ್ನಿ, ಜನರಲ್‌ ಮ್ಯಾನೇಜರ್‌ ಕೇಟ್‌ ಕಲಘನ್‌ ಅವರು ಉಪಸ್ಥಿತರಿದ್ದರು.

"ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಉತ್ತೇಜಿಸುವಲ್ಲಿ ಕರ್ನಾಟಕವು ನಿರಂತರವಾಗಿ ಮುನ್ನಡೆ ಸಾಧಿಸುತ್ತಿದೆ. ರೂ. 8,300 ಕೋಟಿ ಮೊತ್ತದ ಈ ಹೂಡಿಕೆ ಕಾರ್ಯಗತಗೊಳಿಸುವಲ್ಲಿನ ರಾಜ್ಯ ಸರ್ಕಾರ ಮತ್ತು ಷೆರ್ವನ್‌ ಕಂಪನಿ ನಡುವಣ ಸಹಯೋಗವು ಕರ್ನಾಟಕದ ಎಂಜಿನಿಯರಿಂಗ್ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿಗೆ ಸ್ಪಷ್ಟ ನಿದರ್ಶನವಾಗಿದೆ. ನಾವೀನ್ಯತೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಉತ್ತೇಜಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಸಚಿವ ಪಾಟೀಲ್ ತಿಳಿಸಿದರು.

ಷೆರ್ವನ್‌ ಇಂಡಿಯಾದ ಮುಖ್ಯಸ್ಥ ಅಕ್ಷಯ್ ಸಾಹ್ನಿ, ಈ ಹೊಸ ಕೇಂದ್ರದ ಮುನ್ನೋಟದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಕೈಗೆಟುಕುವ, ವಿಶ್ವಾಸಾರ್ಹವಾದ ಶುದ್ಧ ಇಂಧನ ಒದಗಿಸಲು ಭಾರತದ ಅಸಾಧಾರಣ ಪ್ರತಿಭಾನ್ವಿತರು ನಮ್ಮ ಜಾಗತಿಕ ಜಾಲದ ಸಂಪನ್ಮೂಲ ಹಾಗೂ ಪರಿಣತಿ ಜೊತೆಗೆ ಕೆಲಸ ಮಾಡಲು ಈ ಕೇಂದ್ರವು ಅವಕಾಶ ಒದಗಿಸಲಿದೆ.ಈ ಕೇಂದ್ರದಲ್ಲಿ ಇಂಧನ ವ್ಯವಸ್ಥೆಯ ತಂತ್ರಜ್ಞಾನ ಆವಿಷ್ಕಾರಗಳಿಗೆ ವೇಗ ನೀಡಲು ಎಂಜಿನಿಯರಿಂಗ್‌ ಮತ್ತು ಡಿಜಿಟಲ್‌ ಸೇವೆಗಳಿಗೆ ಸಂಬಂಧಿಸಿದಂತೆ 2025ರ ವೇಳೆಗೆ 600 ತಂತ್ರಜ್ಞರನ್ನು ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದರು.

ಆವಿಷ್ಕಾರಕ್ಕೆ ಪೂರಕ ವಾತಾವರಣ ಸೃಷ್ಟಿಸಿರುವ ಪ್ರಗತಿಪರ ನೀತಿಗಳ ಮೂಲಕ ತಾಂತ್ರಿಕ ಪ್ರಗತಿ ಉತ್ತೇಜಿಸಲು ರಾಜ್ಯವು ಅನುಕರಣೀಯ ಕ್ರಮಗಳನ್ನು ತೆಗೆದುಕೊಂಡಿದೆ. ಬೆಂಗಳೂರು ಈಗಾಗಲೇ 500ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (ಜಿಸಿಸಿ) ನೆಲೆಯಾಗಿದ್ದು, ಹಣಕಾಸು, ಆರೋಗ್ಯ, ರಿಟೇಲ್‌ ವ್ಯಾಪಾರ, ತಯಾರಿಕಾ ಮತ್ತಿತರ ವಲಯಗಳು ಸೇರಿದಂತೆ ಭಾರತದ ʼಜಿಸಿಸಿʼಗಳಲ್ಲಿ ಶೇ 30ಕ್ಕಿಂತ ಹೆಚ್ಚು ಪಾಲು ಹೊಂದಿದೆ ಎಂದು ಸಚಿವ ಎಂಬಿ ಪಾಟೀಲ್ ವಿವರಿಸಿದರು.

ಷೆರ್ವನ್‌ ಶ್ರೇಷ್ಠತಾ ಕೇಂದ್ರವು (ಇಎನ್‌ಜಿಐಎನ್‌ಇ) ಸ್ಥಳೀಯ ವೃತ್ತಿಪರರಿಗೆ ಗಮನಾರ್ಹ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. ಸದ್ಯದ ಜಾಗತಿಕ ಇಂಧನ ಬೇಡಿಕೆಗಳನ್ನು ಪೂರೈಸುವ ಸವಾಲಿಗೆ ಸ್ಪಂದಿಸಲು ಮತ್ತು ಭವಿಷ್ಯದಲ್ಲಿ ಕಡಿಮೆ ಇಂಗಾಲ ಹೊರಸೂಸುವ ಶುದ್ಧ ಇಂಧನ ತಯಾರಿಸುವುದಕ್ಕೆ ಕೊಡುಗೆ ನೀಡಲು ಅವರಿಗೆ ಅವಕಾಶ ನೀಡಲಿದೆ. ಇಲ್ಲಿ ಕಾರ್ಯನಿರ್ವಹಿಸಲಿರುವ ಷೆರ್ವನ್‌ ತಂಡವು ಅಂತರರಾಷ್ಟ್ರೀಯ ಭಾಗಿದಾರರ ಸಹಭಾಗಿತ್ವದಲ್ಲಿ ಸಂಕೀರ್ಣ ಸ್ವರೂಪದ ಜಾಗತಿಕ ಕಾರ್ಯಾಚರಣೆಗಳು ಮತ್ತು ಇಂಧನ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು.

ಬೆಂಗಳೂರಿನಲ್ಲಿ ಷೆರ್ವನ್‌ ಶ್ರೇಷ್ಠತಾ ಕೇಂದ್ರದ ಸ್ಥಾಪನೆಯು ತಂತ್ರಜ್ಞಾನ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಆದ್ಯತೆಗಳಿಗೆ ಸೂಕ್ತವಾಗಿ ಹೊಂದಿಕೊಳ್ಳಲಿದೆ. ಈ ಹೂಡಿಕೆಯು ಜಾಗತಿಕ ಕಂಪನಿಗಳ ಪಾಲಿಗೆ ಕರ್ನಾಟಕವು ಪ್ರಮುಖ ತಾಣವಾಗಿರುವುದರ ಮಹತ್ವವನ್ನು ಬಿಂಬಿಸುತ್ತದೆ. ರಾಜ್ಯದ ಅಭಿವೃದ್ಧಿಯಲ್ಲಿ ಉದ್ಯಮ, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುವ ಕರ್ನಾಟಕ ಸರ್ಕಾರದ ಅಚಲ ಬದ್ಧತೆಗೂ ಇದು ಸಾಕ್ಷಿಯಾಗಿದೆ ಎಂದೂ ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT