ಸಚಿವ ಕೃಷ್ಣ ಬೈರೇಗೌಡ 
ರಾಜ್ಯ

ದುಡ್ಡು ಮಾಡಲು ಚುನಾವಣೆ ಅಡ್ಡಿ ಬರಲ್ವಾ?: ಉಪ ವಿಭಾಗಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ

ಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಬೆಂಗಳೂರು: ಜನರ ಕೆಲಸ ಮಾಡುವಾಗ ಬರುವ ಚುನಾವಣೆ ಅಡ್ಡಿ, ದುಡ್ಡು ಮಾಡುವಾಗ ಬರುವುದಿಲ್ಲ ಎಂದು ಉಪ ವಿಭಾಗಾಧಿಕಾರಿಗಳನ್ನು (ಎಸಿ) ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ಸಚಿವರು ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಗಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ಶುಕ್ರವಾರ ವಿಡಿಯೊ ಸಂವಾದದ ಮೂಲಕ ಅವರು ಸಭೆ ನಡೆಸಿದರು.

ಸಭೆಯಲ್ಲಿ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಸಭೆ ನಡೆಸಿ ಎಲ್ಲ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿದೆ. ಆದರೆ, ಕಳೆದ ಮಾರ್ಚ್‍ನಿಂದ ಪ್ರಕರಣ ವಿಲೇವಾರಿ ಕೆಲಸ ಮತ್ತೆ ನಿಂತ ನೀರಾಗಿದೆ ಎಂದ ತೀವ್ರ ಅಸಮಾಧಾನ ಹೊರಹಾಕಿದರು.

ಮಾರ್ಚ್ ತಿಂಗಳವರೆಗೆ ಎಸಿ ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿ ವೇಗವಾಗಿಯೇ ಇತ್ತು. ಆದರೆ, ತದನಂತರ ಈ ವೇಗ ಇಳಿಮುಖವಾಗಿ ಅಧಿಕಾರಿಗಳು ಮತ್ತೆ ಹಳೆಯ ರೀತಿಯಲ್ಲಿಯೇ ವರ್ತಿಸುತ್ತಿದ್ದಾರೆ. ಯಾಕೆ ಹೀಗೆ? ಎಂದು ಪ್ರಶ್ನಿಸಿದರೆ ಚುನಾವಣೆ ನೆಪ ಹೇಳುತ್ತಾರೆ. ಇವರಿಗೆ ದುಡ್ಡು ಮಾಡೋಕೆ ಚುನಾವಣೆ ಅಡ್ಡ ಬರಲ್ಲ, ಆದರೆ, ಜನಪರ ಕೆಲಸ ಮಾಡೋಕೆ ಮಾತ್ರ ಚುನಾವಣೆ ಅಡ್ಡ ಬರುತ್ತಾ? ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ರಾಜ್ಯಾದ್ಯಂತ ಎಸಿ ನ್ಯಾಯಾಲಯಗಳಲ್ಲಿ ಒಟ್ಟಾರೆ 36,430 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಅತ್ಯಧಿಕ ಬೆಂಗಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯದಲ್ಲಿ 4351 ಪ್ರಕರಣಗಳು ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ (ಜ್ಯೂರಿ ಸೆಕ್ಷನ್) ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣಗಳ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಬೆಂ.ಉತ್ತರ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಹಾಗೂ ಬೆಂ.ದಕ್ಷಿಣ ವಿಭಾಗಾಧಿಕಾರಿ ರಜನೀಕಾಂತ್ ಚೌಹ್ಹಾಣ್ ವಿರುದ್ಧ ಆಕ್ರೋಶ ಹೊರಹಾಕಿದ ಸಚಿವರು, ನಿಮ್ಮ ಕಾರ್ಯಕ್ಷೇತ್ರದ ಹೊರಗಿನ ಪ್ರಕರಣಗಳನ್ನೂ ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿದ್ದೀರ. ಹೀಗೆ ಮಾಡಲು ಎಷ್ಟು ಹಣ ತೆಗೆದುಕೊಂಡಿರಿ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, ನಾವು ಒಳ್ಳೆಯ ಮಾತಿನಿಂದ ಹೇಳಿದರೆ ನಿಮ್ಮ ತಲೆಗೆ ಹೋಗೋದೆ ಇಲ್ಲ, ನಿಮಗೆ ನಿಮ್ಮ ಭಾಷೆಯಲ್ಲೇ ಉತ್ತರ ನೀಡಬೇಕು ಎಂದು ಎಚ್ಚರಿಸಿದರು.

ಬಳಿಕ ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆಯೂ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT