ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಫೋಟೋಗಳು ವೈರಲ್ ಆದ ಹಿನ್ನೆಲೆಯಲ್ಲಿ ಕೆರಳಿರುವ ವಿಲ್ಸನ್ ಗಾರ್ಡನ್ ನಾಗ ಫೋಟೋ ವೈರಲ್ ಮಾಡಿದ್ದ ರೌಡಿ ವೇಲುಗೆ ಕಳೆದ ರಾತ್ರಿ ಹಿಗ್ಗಾಮುಗ್ಗ ಥಳಿಸಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.
ರೌಡಿ ವಿಲ್ಸನ್ ಗಾರ್ಡನ್ ನಾಗ ಜೊತೆ ದರ್ಶನ್ ಸ್ಪೆಷಲ್ ಬ್ಯಾರಕ್ ನ ಹೊರಗಡೆ ಕುಳಿತು ಕಾಫಿ ಕುಡಿಯುತ್ತ ಸಿಗರೇಟು ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋವನ್ನು ತೆಗೆದು ನೀನೆ ಮಾಧ್ಯಮಗಳಿಗೆ ಕಳುಹಿಸಿದ್ದೀಯಾ ಎಂದು ವೇಲುಗೆ ನಾಗ ಸೇರಿ ಹತ್ತು ಜನರು ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ಮಾಹಿತಿ ಜೈಲಿನ ಉನ್ನತ ಮೂಲಗಳಿಂದ ಲಭ್ಯವಾಗಿದೆ.
ದರ್ಶನ್ ಫೋಟೋ ವೈರಲ್ ಆದ ಬೆನ್ನಲ್ಲೇ ನಟನಿಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳು ಲಭಿಸುತ್ತಿವೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದರು.
ನಿನ್ನೆ ಈ ಫೋಟೋಗಳು ವೈರಲ್ ಆಗಿದ್ದು ಫೋಟೋದಲ್ಲಿ ವಿಲ್ಸನ್ ಗಾರ್ಡನ ನಾಗ, ಕುಳ್ಳ ಸೀನ ಮತ್ತು ದರ್ಶನ್ ಮ್ಯಾನೆಜರ್ ನಾಗರಾಜು ಜೊತೆ ದರ್ಶನ್ ಹರಟೆ ಹೊಡೆಯುತ್ತಿದ್ದಾರೆ. ಫೋಟೋದಲ್ಲಿ ದರ್ಶನ್ ಕೈಯಲ್ಲಿ ಕಾಫಿ ಮಗ್ ಹಾಗೂ ಸಿಗರೇಟು ಹಿಡಿದಿರುವುದು ಪತ್ತೆಯಾಗಿತ್ತು.
ದರ್ಶನ್ ಫೋಟೋ ವೈರಲ್: ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ವಿಚಾರ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು. ಜೈಲಿನ ಅವ್ಯವಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲಗೊಂಡಿದ್ದಾರೆ. ಪ್ರಸ್ತುತ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಹಾಗೂ ದರ್ಶನ್ ಮತ್ತು ಅವರ ಸಹಚರರನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಕಾರಾಗೃಹಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಡಿಜಿಪಿಗೂ ಸೂಚಿಸಿದ್ದಾರೆ.