ಬೆಂಗಳೂರು: ಇಬ್ಬರು ಬಾಲಕಿಯರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಮಲತಂದೆಯನ್ನು ಅಮೃತಹಳ್ಳಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಕಾವೇರಿ ಲೇಔಟ್ ನಿವಾಸಿ ಕ್ಯಾಬ್ ಡ್ರೈವರ್ ಸುಮಿತ್ ಮೋಹನ್ (45) ಬಂಧಿತ ಆರೋಪಿ. ಹತ್ಯೆಗೀಡಾದ ಬಾಲಕಿಯನ್ನು ಸೃಷ್ಟಿ (14) ಹಾಗೂ ಸೋನಿಯಾ (16) ಎಂದು ಗುರ್ತಿಸಲಾಗಿದೆ. ಬಾಲಕಿಯರು ಕ್ರಮವಾಗಿ 8 ಮತ್ತು 9ನೇ ತರಗತಿ ಓದುತ್ತಿದ್ದರು.
ಹಿರಿಯ ಮಗಳು ಫೋನ್ ನಲ್ಲಿ ಮಾತನಾಡುತ್ತಿದ್ದು, ಊಟ ಬಡಿಸುವಂತೆ ಪದೇ ಪದೇ ಕೇಳಿದರೂ ಕಿವಿಗೊಡದ ಕಾರಣ ಕೋಪದಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಬಳಿಕ ಕಿರಿಯ ಪುತ್ರಿಯನ್ನೂ ಹತ್ಯೆ ಮಾಡಿದ್ದಾನೆಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಬಾಲಕಿಯರ ಹತ್ಯೆ ಬಳಿಕ ಆರೋಪಿ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಭಾನುವಾರ ಯಶವಂತಪುರ ರೈಲ್ವೆ ನಿಲ್ದಾಣದ ಬಳಿಯ ಬಾರ್‌ನಲ್ಲಿ ಮದ್ಯ ಖರೀದಿಸಲು ಬಂದಿದ್ದಾನೆ. ಇದೇ ವೇಳೆ ಉತ್ತರ ಪ್ರದೇಶದ ತನ್ನ ಹುಟ್ಟೂರಿಗೆ ಪರಾರಿಯಾಗಲು ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸಲು ಫೋನ್ ಸ್ವಿಚ್ ಆನ್ ಮಾಡಿದ್ದಾನೆ. ಮೊಬೈಲ್ ಸ್ವಿಚ್ ಆಗುತ್ತಿದ್ದಂತೆಯೇ ಲೋಕೇಷನ್ ಕಂಡುಕೊಂಡ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.