ಎಂಬಿ ಪಾಟೀಲ್ 
ರಾಜ್ಯ

ಉಪನಗರ ರೈಲು ಯೋಜನೆ ವಿಳಂಬ: ಗುತ್ತಿಗೆ ಸಂಸ್ಥೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಎಂ.ಬಿ ಪಾಟೀಲ

ಇದುವರೆಗೂ ಕೇವಲ ಶೇ 28ರಷ್ಟು ಭೌತಿಕ ಹಾಗೂ ಶೇ 22ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಇದೇ ವೇಗದಲ್ಲಿ ಹೋದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಇಲ್ಲ. ಹೀಗಾಗಿ ವಾರ ಮತ್ತು ತಿಂಗಳ ಆಧಾರದಲ್ಲಿ ಪ್ರಗತಿಯನ್ನು ಕೆ-ರೈಡ್‌ ಅಧಿಕಾರಿಗಳು ಪರಿಶೀಲಿಸಬೇಕು.

ಬೆಂಗಳೂರು: ಚಿಕ್ಕಬಾಣಾವಾರ- ಬೈಯ್ಯಪ್ಪನಹಳ್ಳಿ (ಕಾರಿಡಾರ್‌ -2) ನಡುವಿನ ಉಪನಗರ ರೈಲು ಯೋಜನೆ ಆಮೆಗತಿಯಲ್ಲಿ ಸಾಗುತ್ತಿದ್ದು, ಇದಕ್ಕೆ ಕಾರಣವಾದ ಗುತ್ತಿಗೆದಾರ ಸಂಸ್ಥೆಯಾದ ಎಲ್‌ ಆಂಡ್‌ ಟಿ ಅಧಿಕಾರಿಗಳನ್ನು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಮಂಗಳವಾರ ತರಾಟೆಗೆ ತೆಗೆದುಕೊಂಡರು.

ಉಪನಗರ ರೈಲು ಯೋಜನೆಯ ಪ್ರಗತಿ ಪರಿಶೀಲನೆ ಸಭೆ ಖನಿಜ ಭವನದಲ್ಲಿ ನಡೆಯಿತು. ಈ ವೇಳೆ ನಿರೀಕ್ಷಿತ ಪ್ರಗತಿ ಕಾಣದಿದ್ದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. 2025ರ ಆಗಸ್ಟ್‌ ವೇಳೆಗೆ ಮೊದಲ ರೈಲು ಸಂಚಾರ ಆರಂಭಿಸುವುದಾಗಿ ಜನರಿಗೆ ಮಾತು ಕೊಟ್ಟಿದ್ದೇವೆ. ಆದರೆ, ಕಾಮಗಾರಿಯ ವೇಗ ನೋಡಿದರೆ ಕಾರ್ಯರೂಪಕ್ಕೆ ಬರುವುದು ಅನುಮಾನವಾಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಇದುವರೆಗೂ ಕೇವಲ ಶೇ 28ರಷ್ಟು ಭೌತಿಕ ಹಾಗೂ ಶೇ 22ರಷ್ಟು ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಇದೇ ವೇಗದಲ್ಲಿ ಹೋದರೆ ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಇಲ್ಲ. ಹೀಗಾಗಿ ವಾರ ಮತ್ತು ತಿಂಗಳ ಆಧಾರದಲ್ಲಿ ಪ್ರಗತಿಯನ್ನು ಕೆ-ರೈಡ್‌ ಅಧಿಕಾರಿಗಳು ಪರಿಶೀಲಿಸಬೇಕು. ವಿಳಂಬ ಆಗಿರುವ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಯೋಜನೆ ಪ್ರಕಾರ ತಿಂಗಳಿಗೆ ಕನಿಷ್ಠ 55 ಯು.ಗರ್ಡರ್‌, 22 ಪೈಯರ್‌, 42 ಐ-ಗರ್ಡರ್‌ ನಿರ್ಮಿಸಲೇಬೇಕು. ಅಂದರೆ ತಿಂಗಳಿಗೆ ಕನಿಷ್ಠ 54 ಕೋಟಿ ರೂಪಾಯಿ ವೆಚ್ಚ ಮಾಡಬೇಕು. ಆದರೆ, ಈಗ ಕೇವಲ 9 ಕೋಟಿ ಬಿಲ್‌ ಮಾಡುತ್ತಿದ್ದು, ಇದು ತೀರಾ ಕಡಿಮೆ ಎಂದು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇದುವರೆಗೂ ಒಟ್ಟು 459 ಕೋಟಿ ರೂಪಾಯಿ ಆರ್ಥಿಕ ಪ್ರಗತಿ ಸಾಧಿಸಬೇಕಾಗಿತ್ತು. ಆದರೆ, ಆಗಿರುವುದು ಕೇವಲ 86 ಕೋಟಿ ರೂಪಾಯಿ. ಇದೇ ಪರಿಸ್ಥಿತಿ ಮುಂದುವರಿದರೆ ಗುತ್ತಿಗೆದಾರ ಸಂಸ್ಥೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ವಿಳಂಬದಿಂದ ಆಗುವ ನಷ್ಟವನ್ನು ಗುತ್ತಿಗೆದಾರ ಸಂಸ್ಥೆಯಿಂದಲೇ ವಸೂಲಿ ಮಾಡಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.

ಹೀಲಲಗಿ- ರಾಜಾನುಕುಂಟೆ (ಕಾರಿಡಾರ್‌-4) ಯೋಜನೆಯನ್ನು ಕೂಡ ಎಲ್‌ ಆಂಡ್‌ ಟಿ ಸಂಸ್ಥೆ ಗುತ್ತಿಗೆ ಪಡೆದಿದ್ದು, ಕಾಮಗಾರಿಯನ್ನು ಚುರುಕುಗೊಳಿಸಬೇಕಾಗಿದೆ. ವಿದ್ಯುತ್‌, ಚರಂಡಿ ಪೈಪ್‌ ಇತ್ಯಾದಿ ಸೇವೆಗಳನ್ನು ಸ್ಥಳಾಂತರಿಸುವ ಕೆಲಸವನ್ನು ಶೇ 65ರಷ್ಟು ಮುಗಿಸಿದೆ. ಇದಲ್ಲದೆ, ಗರ್ಡರ್‌ ನಿರ್ಮಾಣ ಯಾರ್ಡ್‌ ಸ್ಥಾಪಿಸಲು ಜಾಗ ಗುರುತಿಸಿದ್ದು, ಕಾಮಗಾರಿ ತ್ವರಿತಗತಿಯಲ್ಲಿ ಸಾಗಬೇಕು. ಸೇತುವೆಗಳ ನಿರ್ಮಾಣ ಕೂಡ ಆರಂಭವಾಗಿದ್ದು, ಕಾಮಗಾರಿಗೆ ಮತ್ತಷ್ಟು ಚುರುಕು ನೀಡಬೇಕು ಎಂದು ಅವರು ಸೂಚಿಸಿದರು.

ಎಲ್‌ ಆಂಡ್‌ ಟಿ ಗುತ್ತಿಗೆದಾರ ಸಂಸ್ಥೆಯ ಹಿರಿಯ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಿ, ಕಾಮಗಾರಿಗೆ ವೇಗ ನೀಡಬೇಕು ಎನ್ನುವ ಸೂಚನೆಯನ್ನು ಸಚಿವರು ಕೆ-ರೈಡ್‌ ಅಧಿಕಾರಿಗಳಿಗೆ ನೀಡಿದರು. ಯಾವುದೇ ಕಾರಣಕ್ಕೂ ಕಾಮಗಾರಿ ಮುಗಿಯುವ ಅವಧಿಯನ್ನು ವಿಸ್ತರಿಸುವುದಿಲ್ಲ. ನಿಗದಿತ ಅವಧಿಯೊಳಗೇ ಮುಗಿಸುವ ಹಾಗೆ ರಾತ್ರಿ-ಹಗಲು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿಯೂ ಆದ ಕೆ-ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಡಾ.ಎನ್.‌ಮಂಜುಳಾ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕೆ-ರೈಡ್‌ ಅಧಿಕಾರಿಗಳು ಮತ್ತು ಸಮಾಲೋಚಕರು ಸಭೆಯಲ್ಲಿ ಭಾಗವಹಿಸಿದ್ದರು.

ಗುತ್ತಿಗೆದಾರ ಸಂಸ್ಥೆಯ ಪ್ರಾಜೆಕ್ಟ್ ವ್ಯವಸ್ಥಾಪಕರೂ ಸಭೆಯಲ್ಲಿ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT