ಬೆಂಗಳೂರು: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಕಾರಾಗೃಹದ ವೀಕ್ಷಕ ಕೆ.ಎಸ್.ಸುದರ್ಶನ್, ಜೈಲರ್ ಪರಮೇಶ್ ನಾಯ್ಕ್ ಲಮಾಣಿ, ಸಹಾಯಕ ಜೈಲರ್ ಕೆ.ಬಿ.ರಾಯಮನೆ ಅಮಾನತುಗೊಂಡ ಸಿಬ್ಬಂದಿಗಳಾಗಿದ್ದಾರೆ.
ಜೈಲಿನಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಆಗಸ್ಟ್.24ರಂದು ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ತಪಾಸಣೆ ನಡೆಸಿದ್ದರು. ಈ ವೇಳೆ ಯಾವುದೇ ನಿಷೇಧ ವಸ್ತುಗಳು ಸಿಕ್ಕಿರಲಿಲ್ಲ.
ಆ.23ರ ರಾತ್ರಿ ಕಾರಾಗೃಹದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕಾರಾಗೃಹ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಬಂಧಿಗಳ ಕೊಠಡಿಗಳಿಂದ ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಕಂು ಬಂದಿದೆ.
ಆಗಸ್ಟ್ 23ರ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಮಾನತುಗೊಂಡಿರುವ ಮೂವರು ಸಿಬ್ಬಂದಿಗಳು ಕೊಠಡಿಯಿಂದ ಕೆಲ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ.
ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಇತರರ ಜೊತೆ ನಟ ದರ್ಶನ್ ಕುಳಿತು ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ವಿವಾದ ಹುಟ್ಟುಕೊಂಡಿತು.
ನಟ ದರ್ಶನ್ ಜೈಲು ಫೋಟೊ ವೈರಲ್ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾದ ಸರ್ಕಾರ, ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆಯಿತು. ಬಳಿಕ ಜೈಲಿನಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 9 ಅಧಿಕಾರಿಗಳನ್ನು ಅಮಾನತುಗೊಳಿಸಿತು.ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಅವರೂ ಅಮಾನತುಗೊಂಡಿದ್ದರು. ಈಗ ಅವರ ಸ್ಥಾನಕ್ಕೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾಗಿ ಸುರೇಶ್ ನೇಮಕಗೊಂಡಿದ್ದಾರೆ.