ಬೆಂಗಳೂರು: ಸಂತಾನ ಹರಣದ ಪ್ರಯತ್ನಗಳ ನಡುವೆಯೂ ಬೆಂಗಳೂರಿನಲ್ಲಿ ಬೀದಿನಾಯಿಗಳ ಹಾವಳಿ ಗಣನೀಯವಾಗಿ ಹೆಚ್ಚಾಗಿದ್ದು, ಈ ವರ್ಷದ ಜನವರಿಯಿಂದ 11,448 ಬೀದಿ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಕೇವಲ ಮೂರು ದಿನಗಳಲ್ಲಿ ಮೂರು ಬೀದಿ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಆದಾಗ್ಯೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ವರದಿಯಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪಾಲಿಕೆಯ ಪಶುಸಂಗೋಪನಾ ಇಲಾಖೆ ಸಮರ್ಥಿಸಿಕೊಂಡಿದೆ.
“2019-2020ರಲ್ಲಿ 42,818 ಬೀದಿ ನಾಯಿ ಕಡಿತದ ಪ್ರಕರಣಗಳಿದ್ದವು. ಆದರೆ, ಈ ವರ್ಷ 16,888 ಮಾತ್ರ ವರದಿಯಾಗಿದ್ದು, ಇದರಲ್ಲಿ ಸಾಕು ನಾಯಿ ಕಚ್ಚಿದ ಪ್ರಕರಣಗಳೂ ಸೇರಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಬಿಎಂಪಿ ವಿಶೇಷ ಆರೋಗ್ಯ ಆಯುಕ್ತ ಸುರಲ್ಕರ್ ವಿಕಾಸ್ ಕಿಶೋರ್ ಈ ಬಗ್ಗೆ ಮಾಹಿತಿ ನೀಡಿದ್ದು, 'ಜನವರಿಯಿಂದ ಪ್ರತಿದಿನ ಸುಮಾರು 30 ರಿಂದ 40 ಪ್ರಕರಣಗಳು ದಾಖಲಾಗಿವೆ. 2018 ರ ಅಂಕಿಅಂಶಗಳಿಗೆ ಹೋಲಿಸಿದರೆ, ಸಂಖ್ಯೆಗಳು ತೀವ್ರವಾಗಿ ಕಡಿಮೆಯಾಗಿದೆ.
ಇದಲ್ಲದೇ ಬೀದಿ ನಾಯಿಗಳ ಸಂಖ್ಯೆಯೂ ಕಡಿಮೆಯಾಗಿದೆ. "2019 ರಲ್ಲಿ 3.10 ಲಕ್ಷ ಬೀದಿ ನಾಯಿಗಳು ಇದ್ದವು. ನಿರಂತರ ಸಂತಾನ ಹರಣ ನಿಯಂತ್ರಣ (ಎಬಿಸಿ) ಕಾರ್ಯಕ್ರಮಗಳೊಂದಿಗೆ, 2023 ರಲ್ಲಿ ಸಮೀಕ್ಷೆಯ ಪ್ರಕಾರ, ಸಂಖ್ಯೆ 2.7 ಲಕ್ಷಕ್ಕೆ ಕಡಿಮೆಯಾಗಿದೆ" ಎಂದು ವಿಶೇಷ ಆಯುಕ್ತರು ಹೇಳಿದರು.
ಪಾಲಿಕೆಯು ಶೇ.72 ರಷ್ಟು ಬೀದಿನಾಯಿಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪಶುಸಂಗೋಪನಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಬೀದಿ ನಾಯಿಗಳ ಸಂತತಿಯು ಬೊಮ್ಮನಹಳ್ಳಿ, ಆರ್‌ಆರ್ ನಗರ ಮತ್ತು ಮಹದೇವಪುರದಂತಹ ಹೊರ ಪ್ರದೇಶಗಳಲ್ಲಿದೆ.
ಬೆಂಗಳೂರಿನಲ್ಲಿ 2,79,335 ಬೀದಿನಾಯಿಗಳಿದ್ದು, ಇವುಗಳಲ್ಲಿ 1,65,341 ಗಂಡು ನಾಯಿಗಳು ಮತ್ತು 82,757 ಹೆಣ್ಣು ನಾಯಿಗಳಾಗಿವೆ. 31,237 ನಾಯಿಗಳ ಬಗ್ಗೆ ಇನ್ನೂ ವಿವರಗಳು ತಿಳಿದಿಲ್ಲ. ಇಲಾಖೆಯು ಜನವರಿಯಿಂದ ಎಬಿಸಿ ಕಾರ್ಯಕ್ರಮದಡಿ 12,773 ಬೀದಿನಾಯಿಗಳಿಗೆ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿದೆ ಮತ್ತು ನಾಲ್ಕು ಏಜೆನ್ಸಿಗಳನ್ನು ತೊಡಗಿಸಿಕೊಂಡು 37,394 ಬೀದಿ ನಾಯಿಗಳಿಗೆ ಲಸಿಕೆ ಹಾಕಿದೆ ಎಂದು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಯ್ಯ ಟಿ ಮಾಹಿತಿ ನೀಡಿದರು.
ಪಾಲಿಕೆಯು ಶೇ.72 ರಷ್ಟು ಬೀದಿನಾಯಿಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ ಮತ್ತು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪಶುಸಂಗೋಪನಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದು, ಹೆಚ್ಚಿನ ಬೀದಿ ನಾಯಿಗಳ ಸಂತತಿಯು ಬೊಮ್ಮನಹಳ್ಳಿ, ಆರ್‌ಆರ್ ನಗರ ಮತ್ತು ಮಹದೇವಪುರದಂತಹ ಹೊರ ಪ್ರದೇಶಗಳಲ್ಲಿದೆ ಎಂದು ಹೇಳಿದರು.