ಬೆಂಗಳೂರು: ಬೆಂಗಳೂರಿನಲ್ಲಿ ಸಬರ್ಬನ್ ರೈಲು ಯೋಜನೆಗಳು ಪ್ರಗತಿಯಲ್ಲಿದ್ದು, ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ಮಾರ್ಗ ಜೂನ್ 2025 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ ಅವರು ಮಂಗಳವಾರ ಹೇಳಿದ್ದಾರೆ.
ಕಳೆದ ತಿಂಗಳು ಬೆಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆ ನಂತರ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿರುವ ಪಿಸಿ ಮೋಹನ್ ಅವರು, ನೈರುತ್ಯ ರೈಲ್ವೆಯ ಕನ್‌ಸ್ಟ್ರಕ್ಷನ್ಸ್ ವಿಭಾಗ ಮತ್ತು ಕೆ-ರೈಡ್‌ನಿಂದ ನಡೆಯುತ್ತಿರುವ ಹಲವಾರು ರೈಲ್ವೆ ಯೋಜನೆಗಳ ಗಡುವನ್ನು ಹಂಚಿಕೊಂಡಿದ್ದಾರೆ.
ಕರ್ನೂಲ್ ಸಂಸದ ಡಾ.ಸಿ.ಎಂ.ರಮೇಶ್ ಅವರ ಅಧ್ಯಕ್ಷತೆಯಲ್ಲಿ 15 ಸದಸ್ಯರನ್ನೊಳಗೊಂಡ ರೈಲ್ವೆ ಸಂಸದೀಯ ಸಮಿತಿಯು ನವೆಂಬರ್ 2 ರಂದು ರೈಲ್ ವೀಲ್ ಫ್ಯಾಕ್ಟರಿಗೆ ಭೇಟಿ ನೀಡಿತ್ತು.
ಹೊಸೂರು-ಸೇಲಂ ಮಾರ್ಗವಾಗಿ ಯಶವಂತಪುರ ಮತ್ತು ಬೈಯಪನಹಳ್ಳಿ-ಹೊಸೂರು ಮಾರ್ಗ ಮುಂದಿನ ವರ್ಷ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬಿಜೆಪಿ ಸಂಸದ ತಿಳಿಸಿದ್ದಾರೆ.
ಸರ್ಕಲ್ ರೈಲ್ ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ, ವಡ್ಡರಹಳ್ಳಿ-ದೇವನಹಳ್ಳಿ ಭಾಗದ ಸಮೀಕ್ಷೆ ಪೂರ್ಣಗೊಂಡಿದ್ದು, ಡಿಪಿಆರ್ ಅನ್ನು ರೈಲ್ವೆ ಮಂಡಳಿಗೆ ಈಗಾಗಲೇ ಮಂಡಿಸಲಾಗಿದೆ. ಇದಕ್ಕಾಗಿ ₹1638.24 ಕೋಟಿ ರೂಪಾಯಿಗೆ ಅನುದಾನ ಕೋರಲಾಗಿದೆ. ರೈಲ್ವೆ ಮಂಡಳಿಯು 2025 ಫೆಬ್ರವರಿಯ ಒಳಗೆ ಸಂಪೂರ್ಣ ಡಿಪಿಆರ್ ಅನ್ನು ಮಂಡನೆ ಮಾಡುವಂತೆ ಹೇಳಲಾಗಿದೆ.
ಉಳಿದ 6 ಭಾಗಗಳು (ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡವಂದ-ವಡ್ಡರಹಳ್ಳಿ)ದಲ್ಲಿ ಇನ್ನೂ ಸರ್ವೆ ಕಾರ್ಯ ಮುಂದುವರಿದಿದೆ.
ಈಗಾಗಲೇ ಪಾಣತ್ತೂರು ರೈಲ್ವೆ ಅಂಡರ್‌ಪಾಸ್‌ನ (RUB) ಒಂದು ಭಾಗದ ಮಾರ್ಗ ಮುಕ್ತಾಯವಾಗಿದ್ದು, ಇನ್ನೊಂದು ಭಾಗದ ಮಾರ್ಗದ ಕಾಮಗಾರಿ ಜನವರಿ 2025 ರೊಳಗೆ ಪ್ರಾರಂಭವಾಗಲಿದೆ ಎಂದು ಪಿಸಿ ಮೋಹನ್ ತಿಳಿಸಿದ್ದಾರೆ.