ಬೆಂಗಳೂರು: ಕೋರಮಂಗಲ ಮತ್ತು ಮೇಖ್ರಿ ವೃತ್ತ ಮಾರ್ಗವಾಗಿ ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗಕ್ಕೆ (ಹಂತ 3ಎ) ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ದೊರೆತಿದ್ದು, ಬೆಂಗಳೂರಿನ ನಗರ ಸಾರಿಗೆ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಪ್ರಸ್ತಾವಿತ ಮಾರ್ಗವು ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ಭಾಗಗಳನ್ನು ಪ್ರಮುಖ ವ್ಯವಹಾರಿಕ ಜಿಲ್ಲೆಯ ಮೂಲಕ ಸಂಪರ್ಕಿಸುತ್ತದೆ. ಈ ಬೆಳವಣಿಗೆಯು ನಗರದಾದ್ಯಂತ ಮೆಟ್ರೋ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಪ್ರಯಾಣಿಕರಿಂದ ಸ್ವಾಗತಿಸಲ್ಪಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7, 2023 ರಂದು ತಮ್ಮ ಬಜೆಟ್ ಭಾಷಣದಲ್ಲಿ ಸುಮಾರು ರೂ. 16,000 ಕೋಟಿ ಅಂದಾಜು ವೆಚ್ಚದ ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗವನ್ನು ಘೋಷಿಸಿದ್ದರು. ಆದರೆ, ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಪರಿಷ್ಕೃತ ವಿವರವಾದ ಯೋಜನಾ ವರದಿಯಲ್ಲಿ (ಡಿಪಿಆರ್) ತಗಲುವ ವೆಚ್ಚ ರೂ. 28,405 ಕೋಟಿ ಆಗಿದೆ.
ರಾಜ್ಯ ಸಚಿವ ಸಂಪುಟದ ಅನುಮೋದನೆ ಹೊರತಾಗಿಯೂ ಕಾಮಗಾರಿ ಶುರುವಿಗೂ ಮುನ್ನಾ ಯೋಜನೆಗೆ ಇನ್ನೂ ಅನೇಕ ಅನುಮೋದನೆಗಳು ಬೇಕಾಗುತ್ತವೆ. ಈ ಮಾರ್ಗ ಮೊದಲು ಕೇಂದ್ರದ ನಗರ ಸಾರಿಗೆ ಸಂಸ್ಥೆ ಮತ್ತು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಅನುಮತಿ ಪಡೆಯಬೇಕು ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೂಲಗಳು ಬಹಿರಂಗಪಡಿಸಿವೆ. ಈ ಸಂಸ್ಥೆಗಳು ಡಿಪಿಆರ್ ಪರಿಶೀಲಿಸಿ, ಸಲಹೆಗಳನ್ನು ನೀಡಲಿವೆ.
ಪರಿಷ್ಕೃತ ಡಿಪಿಆರ್ ಅನ್ನು ನೀತಿ ಆಯೋಗ, ರೈಲ್ವೆ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ, ಪರಿಸರ ಸಚಿವಾಲಯ, ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಅಂಕಿಅಂಶಗಳ ಇಲಾಖೆ ಸೇರಿದಂತೆ ಹತ್ತು ಕೇಂದ್ರ ಇಲಾಖೆಗಳಿಗೆ ಯೋಜನಾ ಹೂಡಿಕೆ ಟಿಪ್ಪಣಿಯೊಂದಿಗೆ ಕಳುಹಿಸಲಾಗುತ್ತದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಅಂತಿಮ ಡಿಪಿಆರ್ ಸಲ್ಲಿಸುವ ಮೊದಲು ಪ್ರತಿಯೊಂದು ಇಲಾಖೆಯ ಪ್ರತಿಕ್ರಿಯೆಯನ್ನು ತಿಳಿಸಬೇಕಾಗುತ್ತದೆ.
ಸಂಪೂರ್ಣ ಅನುಮೋದನೆ ಪ್ರಕ್ರಿಯೆಯು ಆರು ತಿಂಗಳಿಂದ ಒಂದು ವರ್ಷದ ನಡುವೆ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದೆ. ಜೂನ್ 2025 ರೊಳಗೆ ಆರಂಭಿಕ ಸಂಭಾವ್ಯ ಅನುಮೋದನೆ ನಿರೀಕ್ಷಿಸಲಾಗಿದೆ. ಆದಾಗ್ಯೂ, ಗಡುವು ಡಿಸೆಂಬರ್ 2025 ರವರೆಗೆ ವಿಸ್ತರಿಸಬಹುದು.
ಮಹತ್ವಾಕಾಂಕ್ಷೆಯ ಸರ್ಜಾಪುರ-ಹೆಬ್ಬಾಳ ಮಾರ್ಗವು ಬೆಂಗಳೂರಿನ ಸಾರ್ವಜನಿಕ ಸಾರಿಗೆ ಜಾಲವನ್ನು ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ. ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕಾರ್ಯಾಚರಣೆಯ ನಂತರ ನಗರದಾದ್ಯಂತ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.
ಡಿಪಿಆರ್ ಸಲ್ಲಿಕೆ ವಿಳಂಬಕ್ಕೆ ಕಾರಣಗಳು: ರೈಲು ನಿಲ್ದಾಣದ ವಿನ್ಯಾಸ ಪರಿಷ್ಕರಣೆ ಮತ್ತು ಕೆಲವೊಂದು ಬದಲಾವಣೆ ಕಾರಣದಿಂದ ಸರ್ಜಾಪುರ-ಹೆಬ್ಬಾಳ ಮೆಟ್ರೊ ಮಾರ್ಗದ ವಿವರವಾದ ಯೋಜನಾ ವರದಿ (ಡಿಪಿಆರ್) ಸಲ್ಲಿಕೆಯು ವಿಳಂಬವನ್ನು ಎದುರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಡಿಪಿಆರ್ ಅಂತಿಮಗೊಳಿಸುವಲ್ಲಿನ ವಿಳಂಬವು ಮೆಟ್ರೋ ಯೋಜನೆಯ ಒಟ್ಟಾರೆ ಗಡುವಿನ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.