ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಲ್ಲಾ ಎಂಟು ವಲಯಗಳಲ್ಲಿ ದಾಖಲೆ ಮಟ್ಟದಲ್ಲಿ ಆಸ್ತಿ ಸಂಗ್ರಹಿಸಿದೆ. ಈ ಪೈಕಿ ಮಹದೇವಪುರ ವಲಯದಲ್ಲಿ ನವೆಂಬರ್ ಮಾಸಾಂತ್ಯಕ್ಕೆ ಅತ್ಯಧಿಕ 1154.49 ಕೋಟಿ ರೂ. ಸಂಗ್ರಹವಾಗಿದೆ.
ಸರ್ಕಾರ ಮತ್ತು ಪಾಲಿಕೆಯಿಂದ ಜಾರಿಗೆ ತರಲಾದ ಓಟಿಎಸ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಸಲುವಾಗಿ ಉಪ-ವಿಭಾಗ ಮತ್ತು ವಾರ್ಡ್ ಮಟ್ಟದಲ್ಲಿ ಆಸ್ತಿ ಮಾಲೀಕರೊಂದಿಗೆ ನಿರಂತರ ಜನ ಸಂಪರ್ಕ ಸಭೆ ನಡೆಸಲಾಗಿದೆ.
ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದ್ದ ಸುಸ್ತಿದಾರರು, ಆಸ್ತಿ-ತೆರಿಗೆ ಪರಿಷ್ಕರಣೆಗೊಂಡಿರುವ ಪ್ರಕರಣಗಳು ಹಾಗೂ ತೆರಿಗೆ ವ್ಯಾಪ್ತಿಗೆ ಒಳಪಡೆ ಇದ್ದಂತಹ ಆಸ್ತಿ ಮಾಲೀಕರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುವ ಮೂಲಕ ಜನರಿಗೆ ಓಟಿಸ್ ಬಗ್ಗೆ ಮಾಹಿತಿ ನೀಡಿರುವುದರಿಂದ ಅತಿ ಹೆಚ್ಚು ಆಸ್ತಿ-ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.
ಮಹದೇವಪುರ ವಲಯ ವ್ಯಾಪ್ತಿಯ ಕೆ.ಆರ್ ಪುರ ಉಪ-ವಿಭಾಗ ಹಾಗೂ ಹೂಡಿ ಉಪ-ವಿಭಾಗಗಳೆರಡೂ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಶೇ.90ರಷ್ಟು ಪ್ರಗತಿ ಸಾಧಿಸಿದ್ದು, ಒಟ್ಟಾರೆಯಾಗಿ ಮಹದೇವಪುರ ವಲಯವು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಶೇ.88.19 ರಷ್ಟು ಗುರಿ ಸಾಧಿಸಿದೆ ಎಂದು ಹೇಳಿದ್ದಾರೆ. ಇತರೆ ವಲಯಗಳಲ್ಲಿ 150-725 ಕೋಟಿ ರೂ.ವರೆಗೆ ತೆರಿಗೆ ಸಂಗ್ರಹಿಸಲಾಗಿದೆ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.