ಬೆಂಗಳೂರು: 3,300 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಓಜೋನ್ ಅರ್ಬನ್ ಇನ್‌ಫ್ರಾ ಡೆವಲಪರ್ಸ್ ಲಿಮಿಟೆಡ್ ವಿರುದ್ಧ ಫ್ಲ್ಯಾಟ್ ಖರೀದಿದಾರರು ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಓಜೋನ್ ಅರ್ಬನ್ ಇನ್‌ಫ್ರಾ ಡೆವಲಪರ್ಸ್ ಲಿಮಿಟೆಡ್ ಮತ್ತು ಕೆಲವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೇವನಹಳ್ಳಿ ತಾಲ್ಲೂಕಿನ ಓಜೋನ್ ಅರ್ಬನಾ ಟೌನ್‌ಶಿಪ್ ಯೋಜನೆಯ ಕ್ಷೇಮಾಭಿವೃದ್ಧಿ ಸಂಘವು ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಎಫ್ಐಆರ್ ದಾಖಲಿಸಿದೆ.
ಓಜೋನಾ ನಗರ ಖರೀದಿದಾರರ ಕಲ್ಯಾಣ ಸಂಘದ ಅಧ್ಯಕ್ಷ ಎರೋಲ್ ಜಾನ್ ನೊರೊನ್ಹಾ ಅವರು ಎಫ್‌ಐಆರ್ ದಾಖಲಿಸಿದ್ದು, ಓಜೋನ್ ಅರ್ಬನ್ ಇನ್‌ಫ್ರಾ ಡೆವಲಪರ್ಸ್ ಲಿಮಿಟೆಡ್ ಮತ್ತು ಕೆಲವು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 406, 409, 420 ಮತ್ತು 120 ಬಿ, 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಎಫ್ಐಆರ್ ನಲ್ಲಿ ಬಿಲ್ಡರ್ ನನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದ್ದು, ನಿರ್ದೇಶಕರು ಮತ್ತು ಇತರ ಸಿಬ್ಬಂದಿಗಳಾದ ವಾಸುದೇವನ್ ಸತ್ಯಮೂರ್ತಿ, ಪ್ರಿಯಾ ವಾಸುದೇವನ್ ಮತ್ತು ಸತ್ಯಮೂರ್ತಿ ಸಾಯಿ ಪ್ರಸಾದ್ ಅವರನ್ನು ಎ2 ರಿಂದ 4 ರವರೆಗೆ ಹೆಸರಿಸಲಾಗಿದೆ.
ಪ್ರಕರಣದಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ, ಪ್ರೈಮಲ್ ಕ್ಯಾಪಿಟಲ್ ಮತ್ತು ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಅಧಿಕಾರಿಗಳನ್ನೂ ಆರೋಪಿಗಳೆಂದು ಹೆಸರಿಸಲಾಗಿದೆ.
ಪ್ರಕರಣ ಸಂಬಂಧ ಓಝೋನ್ ಅರ್ಬಾನಾ ಖರೀದಿದಾರರ ಕಲ್ಯಾಣ ಸಂಘವನ್ನು ಪ್ರತಿನಿಧಿಸುವ ವಕೀಲ ರೆನಾಲ್ಡ್ ಡಿ'ಸೋಜಾ ಅವರು ಮಾತನಾಡಿ, ಪೊಲೀಸ್ ಆಯುಕ್ತರು (ಅಪರಾಧ) ಹೊರಡಿಸಿದ ಆದೇಶದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳು ಖರೀದಿದಾರರಿಗೆ ಮಾಹಿತಿ ನೀಡದೆ 1,500 ಕೋಟಿ ರೂ.ಗೆ ಫ್ಲ್ಯಾಟ್ ಗಳನ್ನು ಅಡಮಾನವಿಟ್ಟಿದ್ದಾರೆ. ಮನೆ ಖರೀದಿದಾರರಿಂದ 1,800 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಒಟ್ಟಾರೆ ಮನೆ ಖರೀದಿದಾರರಿಗೆ 3,300 ಕೋಟಿ ರೂ. ಹಣ ವಂಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕನ್ನಮಂಗಲ ಗ್ರಾಮದ ವಸತಿ ಸಮುಚ್ಚಯವು 45 ಎಕರೆ ಪ್ರದೇಶಲ್ಲಿ 1,800 ಫ್ಲಾಟ್‌ಗಳನ್ನು ಹೊಂದಿದ್ದು, ಫ್ಲಾಟ್‌ಗಳ ಮಾರಾಟವು 2013 ರಲ್ಲಿ ಪ್ರಾರಂಭವಾಗಿತ್ತು. ಫ್ಲ್ಯಾಟ್ ಗಳನ್ನು 2017 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು. ಪ್ರಾಜೆಕ್ಟ್ ಪ್ರಾರಂಭವಾಗಿ 12 ವರ್ಷಗಳು ಕಳೆದಿವೆ. ಆದರೆ, ಖರೀದಿದಾರರಿಂದ ಹಣ ಪಡೆದು, ಇಲ್ಲಿಯವರೆಗೆ ಫ್ಲ್ಯಾಟ್ ಗಳನ್ನು ವಿತರಿಸಿಲ್ಲ. ಇಂದಿನವರೆಗೆ ಕೇವಲ 49 ಪ್ರತಿಶತದಷ್ಟೇ ಯೋಜನೆ ಪೂರ್ಣಗೊಂಡಿದೆ. ಈ ಹಿಂದೆ ಕರ್ನಾಟಕ-ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಮನೆ ಮಾಲೀಕರಿಗೆ ಹಣ ಮರುಪಾವತಿಸುವಂತೆ ಕಂಪನಿಗೆ ನಿರ್ದೇಶನ ನೀಡಿತ್ತು. ಆದರೆ, ಆದೇಶಗಳನ್ನು ಪಾಲನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಆಕ್ಯುಪೆನ್ಸಿ ಸರ್ಟಿಫಿಕೇಟ್ ಮತ್ತು ಇತರ ಸೌಲಭ್ಯಗಳಿಲ್ಲದೆಯೇ ಹಲವರು ಫ್ಲ್ಯಾಟ್ ಗಳಲ್ಲಿ ಜೀವನ ನಡೆಸಲು ಆರಂಭಿಸಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ. ಬಿಲ್ಡರ್ ಕೇಳಿದ ಸಂಪೂರ್ಣ ಹಣವನ್ನು ನೀಡಿದ್ದಾರೆ. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಕೂಡ ವಂಚನೆಯಲ್ಲಿ ಭಾಗಿಯಾಗಿರುವುದು ಸಾಬೀತಾಗುತ್ತಿದೆ ಎಂದು ಆರೋಪಿಸಿದ್ದಾರೆ.