ಮುಂಡಗೋಡು: ಹದಿನೆಂಟು ವರ್ಷ ಅಂದರೆ ಸಾಮಾನ್ಯವಾಗಿ ಹುಡುಗಾಟಿಕೆ ವಯಸ್ಸು, ಅದೇ ರೀತಿ ಅದಮ್ಯ ಕನಸು, ಗುರಿ, ಉತ್ಸಾಹ ಹೊಂದಿರುವ ವಯಸ್ಸು ಕೂಡ ಆಗಿರುತ್ತದೆ. ಉತ್ತರ ಕನ್ನಡದ ಮುಂಡಗೋಡಿನ ಸಿದ್ದಿ ಜನಾಂಗದ ಅಕ್ಷಯ ಸಿದ್ದಿ ಹೃದಯದಲ್ಲಿ ಅಪಾರ ಕನಸುಗಳಿವೆ.
100 ಮೀಟರ್ ಸ್ಪ್ರಿಂಟ್ ನ್ನು 11 ಸೆಕೆಂಡುಗಳಲ್ಲಿ ಪೂರ್ಣಗೊಳಿಸಲು ದಣಿವರಿಯದೆ ಕೆಲಸ ಮಾಡಿದ್ದಾರೆ. ಈ ಸಾಧನೆಯು ಶೀಘ್ರದಲ್ಲೇ ಅವರನ್ನು ಇಂಗ್ಲೆಂಡಿನಲ್ಲಿ ಒಲಿಂಪಿಕ್ ಮಟ್ಟದ ತರಬೇತುದಾರರ ಅಡಿಯಲ್ಲಿ ತರಬೇತಿ ಪಡೆಯುವಂತೆ ಮಾಡಲಿದೆ. ಅಕ್ಷಯ್ ಅವರ ಪೋಷಕರು, ತಮ್ಮ ಮಗನ ಕನಸಿಗೆ ಪ್ರೋತ್ಸಾಹದ ಧಾರೆಯೆರೆಯುತ್ತಿದ್ದಾರೆ.
ಇದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಸಿದ್ದಿ ಜನಾಂಗದ ಅನೇಕ ಯುವಕ-ಯುವತಿಯರು ಈಗ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುವ ಕನಸು ಕಾಣಬಹುದಾಗಿದೆ. ಗೋಸ್ಪೋರ್ಟ್ಸ್ ಫೌಂಡೇಶನ್ ಸಹಯೋಗದೊಂದಿಗೆ, ಆರ್‌ಸಿಬಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ವಿಶಿಷ್ಟ ಕ್ರೀಡಾ ತರಬೇತಿ ಸೌಲಭ್ಯವನ್ನು ಸ್ಥಾಪಿಸಿದೆ.
ಪ್ರಸಿದ್ಧ ಟಿಬೆಟಿಯನ್ ಮಠಕ್ಕೆ ಹೆಸರುವಾಸಿಯಾಗಿರುವ ಮುಂಡಗೋಡು ಈಗ ಹಾಸ್ಟೆಲ್, ಅಡುಗೆಮನೆ, ತರಬೇತುದಾರರು ಮತ್ತು ಒಳಾಂಗಣ ಜಿಮ್‌ಗಳನ್ನು ಹೊಂದಿರುವ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯ ವಿವಿಧೆಡೆಯಿಂದ ಆಯ್ಕೆಯಾದ ಸುಮಾರು 25 ಬಾಲಕ-ಬಾಲಕಿಯರು ಇಲ್ಲಿ ಉಳಿದುಕೊಂಡು ವಿಶೇಷ ಕ್ರೀಡಾ ತರಬೇತಿ ಪಡೆಯುತ್ತಿದ್ದಾರೆ.
ಈ ಸೌಲಭ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರಾಜೇಶ್ ಮೆನನ್ ಉದ್ಘಾಟಿಸಿದ್ದಾರೆ. ಮಹತ್ವಾಕಾಂಕ್ಷಿ ಯುವ ಅಥ್ಲೀಟ್‌ಗಳು ದೊಡ್ಡ ಕನಸುಗಳನ್ನು ಕಾಣಲು ಮತ್ತು ಭಾರತದ ಕ್ರೀಡೆಯಲ್ಲಿ ತಮ್ಮ ಗುರಿಗಳತ್ತ ಕೆಲಸ ಮಾಡಲು ಅವರು ಪ್ರೋತ್ಸಾಹಿಸಿದರು.
“ಭಾರತವು ವೈವಿಧ್ಯಮಯ ಕ್ರೀಡಾ ಪ್ರತಿಭೆಗಳನ್ನು ಹೊಂದಿದೆ. ಉತ್ತರ ಭಾರತದ ಕಡೆಗೆ ಹೋದರೆ ಕುಸ್ತಿಯನ್ನು ಕಾಣುತ್ತೀರಿ. ಬಾಕ್ಸಿಂಗ್ ನಲ್ಲಿ ಈಶಾನ್ಯ ರಾಜ್ಯಗಳು ಮಿಂಚುತ್ತಿವೆ. ಅಂತೆಯೇ, ಕರ್ನಾಟಕದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸುವ ಮೂಲಕ ನಾವು ಸಿದ್ದಿ ಸಮುದಾಯವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಮೆನನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.
ಮಕ್ಕಳಿಗೆ ತರಬೇತಿ ನೀಡಲು ನಿಯಮಿತವಾಗಿ ಮುಂಡಗೋಡಕ್ಕೆ ಭೇಟಿ ನೀಡುವ ರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಆರ್‌ಸಿಬಿ ಒದಗಿಸುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡಾ ಶಿಬಿರಗಳನ್ನು ಆಯೋಜಿಸಲು, ಆಹಾರ ತಜ್ಞರನ್ನು ನೇಮಿಸಲು ಮತ್ತು ಕ್ರೀಡಾ ಮನಶ್ಶಾಸ್ತ್ರಜ್ಞರನ್ನು ಕರೆತರಲು ನಾವು ಯೋಜಿಸಿದ್ದೇವೆ.
ಸಿದ್ದಿ ಸಮುದಾಯದಿಂದ ಆಯ್ಕೆಯಾದ ಈ ಮಕ್ಕಳು ಅಸಾಧಾರಣ ಅಥ್ಲೆಟಿಕ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಪ್ರತಿಭೆಯನ್ನು ಪೋಷಿಸಲು ಆರ್ ಸಿಬಿ ಬದ್ಧವಾಗಿದೆ. ಈಗಾಗಲೇ ಈ ಸೌಲಭ್ಯದಿಂದ ಇಬ್ಬರು ಸ್ಪ್ರಿಂಟರ್‌ಗಳು ಯುಕೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕಮಲಾ ಸಿದ್ದಿ, ಸಿದ್ದಿ ಸಮುದಾಯದ ಖ್ಯಾತ ಕ್ರೀಡಾಪಟು ಮತ್ತು ಪ್ರಸ್ತುತ ಭಾರತೀಯ ರೈಲ್ವೇಯಲ್ಲಿ ಉದ್ಯೋಗಿಯಾಗಿದ್ದು, ಮುಂಡಗೋಡಿನಲ್ಲಿ ತರಬೇತಿ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಕಮಲಾ ಅವರು ಹಲವಾರು ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ.
ಸಿದ್ದಿಗಳು ಕರ್ನಾಟಕದ ಸ್ಥಳೀಯ ಬುಡಕಟ್ಟು ಸಮುದಾಯವಾಗಿದ್ದು, ಆಗ್ನೇಯ ಆಫ್ರಿಕಾದಿಂದ ಬಂದವರು. ಪೋರ್ಚುಗೀಸರ ಕಾಲದಲ್ಲಿ ಅವರನ್ನು ಭಾರತಕ್ಕೆ ತರಲಾಯಿತು. ಇಂದು ಭಾರತದಲ್ಲಿ ಸುಮಾರು 50,000 ಸಿದ್ದಿಯರಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರು ನೆಲೆಸಿದ್ದಾರೆ.
ಹಳಿಯಾಳದ ಹದಿನಾರರ ಹರೆಯದ ಸುಶ್ಮಿತಾ ಸಿದ್ದಿ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ ದೊಡ್ಡ ಕನಸುಗಳನ್ನು ಹೊಂದಿದ್ದಾರೆ. 100 ಮೀಟರ್ ಮತ್ತು 200 ಮೀಟರ್ ಓಟಕ್ಕೆ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಐದು ವರ್ಷಗಳ ಕಾಲ ಅಭ್ಯಾಸ ಮಾಡಿದ ಅವರು ಇತ್ತೀಚೆಗೆ 4x100 ರಿಲೇಯಲ್ಲಿ ರಾಜ್ಯ ಪದಕ ಗೆದ್ದಿದ್ದಾರೆ.
ನಾನು ಗೇಬ್ರಿಯಲ್ ಥಾಮಸ್ ನ್ನು ಸ್ಫೂರ್ತಿ ಎಂದು ಪರಿಗಣಿಸುತ್ತೇನೆ, ಕ್ರೀಡೆಯಲ್ಲಿ ಉತ್ತಮ ಯಶಸ್ಸನ್ನು ಸಾಧಿಸಲು ನಾನು ಬಯಸುತ್ತೇನೆ. ಆರ್ ಸಿಬಿ ಸೌಲಭ್ಯವು ನಮಗೆ ಅತ್ಯುತ್ತಮ ತರಬೇತಿಯನ್ನು ನೀಡುತ್ತದೆ ಮತ್ತು ನುರಿತ ತರಬೇತುದಾರರ ಮಾರ್ಗದರ್ಶನ ನಮಗೆ ಸಿಗುತ್ತಿದೆ ಎಂದರು.