ವಕ್ಫ್ ಅತಿಕ್ರಮಣದ ಬಗ್ಗೆ ಮಾತನಾಡದಿರಲು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ಬಿ.ವೈ ವಿಜಯೇಂದ್ರ 150 ಕೋಟಿ ರೂಪಾಯಿ ಆಮಿಷವೊಡ್ಡಿದ್ದರು ಎಂಬ ಸಚಿವ ಪ್ರಿಯಾಂಕ ಖರ್ಗೆಯವರ ಮಾತು ವಿಧಾನಸಭೆಯಲ್ಲಿಂದು ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ವಾಗ್ಯುದ್ದಗಳಿಗೆ ಕಾರಣವಾಗಿತ್ತು. ಈ ವೇಳೆ ಪ್ರತಿಪಕ್ಷ ಸದಸ್ಯರು, ತಾಕತ್ತಿದ್ದರೆ ಈ ಬಗ್ಗೆ ಸಿಬಿಐ ತನಿಖೆ ನಡೆಸಿ ಎಂದು ಆಗ್ರಹಿಸಿದರು. ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಕ್ಫ್ ಆಸ್ತಿ ದುರುಪಯೋಗ ಕುರಿತು ಮಾಣಿಪ್ಪಾಡಿ ವರದಿ ಕೊಟ್ಟಿದ್ದರು. ನಂತರ ಉಪಲೋಕಾಯುಕ್ತ ನ್ಯಾ.ಆನಂದ್ ಅವರು 2016ರಲ್ಲಿ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವರದಿ ನೀಡಿದ್ದರು. ಆದರೆ ಅಂದಿನ ಸಿಎಂ ಉಪಲೋಕಾಯುಕ್ತರ ವರದಿ ಮುಚ್ಚಿ ಹಾಕಿದ್ದರು ಎಂದು ಆರೋಪಿಸಿದರು. ತಾಕತ್ತಿದ್ದರೆ ಸಿಬಿಐ ತನಿಖೆ ನಡೆಸಿ. ಎಲ್ಲದರ ಬಗ್ಗೆಯೂ ಸಿಬಿಐ ತನಿಖೆಯಾಗಲಿ ಎಂದು ಸವಾಲು ಹಾಕಿದ್ದು ಸರ್ಕಾರವು ಇಕ್ಕಟ್ಟಿಗೆ ಸಿಲುಕುವಂತಾಯಿತು.
ಮುಂದಿನ ಮೂರು ದಿನಗಳಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷಗಳು ಯಾವ ವಿಷಯಗಳನ್ನು ಎತ್ತಬಹುದೆಂದು ನಾವು ಊಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಕ್ಫ್ ಸಮಸ್ಯೆಗೆ ಸಂಬಂಧಿಸಿದಂತೆ, "ನಾವು ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಮತ್ತು ಚರ್ಚೆ ಪೂರ್ಣಗೊಂಡಿಲ್ಲ. ಅವರು ಈ ವಿಷಯವನ್ನು ಪ್ರಸ್ತಾಪಿಸುತ್ತಾರೋ ಅಥವಾ ಉತ್ತರ ಕರ್ನಾಟಕದ ಸಮಸ್ಯೆಗಳತ್ತ ಗಮನ ಹರಿಸುತ್ತಾರೋ ಗೊತ್ತಿಲ್ಲ. ಉತ್ತರಿಸಲು ಮತ್ತು ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದರು. ಬಿವೈ ವಿಜಯೇಂದ್ರ 150 ಕೋಟಿ ರೂ. ಆಮಿಷವೊಡ್ಡಿರುವುದಾಗಿ ಈ ಹಿಂದೆಯೇ ಅನ್ವರ್ ಮಾಣಿಪ್ಪಾಡಿ ಹೇಳಿಕೆ ನೀಡಿದ್ದರು. ಆದರೆ ಇದೀಗ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಿದರು. ಅನ್ವರ್ ಹೇಳಿಕೆಯನ್ನು ಆಧರಿಸಿ ನಾನು ಪ್ರತಿಕ್ರಿಯಿಸಿದ್ದೇ. ಅದನ್ನು ಅವರೇ ಸುಳ್ಳು ಎಂದು ಹೇಳಿದರೆ, ನಾವು ಏನು ಮಾಡಬೇಕು? ನನ್ನ ದೃಷ್ಟಿಯಲ್ಲಿ, ಅನ್ವರ್ ಆರೋಪಗಳನ್ನು ಮಾಡುತ್ತಿರುವ ವಿಡಿಯೊ ರೆಕಾರ್ಡಿಂಗ್ ಇದೆ ಎಂದರು.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು ಇಂದು ಬಿಜಿಎಸ್ ಆಸ್ಪತ್ರೆಯಿಂದ ಹೊರಬಂದ ದರ್ಶನ್ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿ ಶ್ಯೂರಿಟಿ ಬಾಂಡ್ ಗೆ ಸಹಿ ಹಾಕಿದರು. ಸೆಷನ್ಸ್ ಕೋರ್ಟ್‌ನಲ್ಲಿ 1 ಲಕ್ಷ ರೂಪಾಯಿ ಜಾಮೀನು ಬಾಂಡ್ಗೆ ದರ್ಶನ್ ಸಹಿ ಮಾಡಿದ್ದು, ಪಾಸ್ ಪೋರ್ಟ್ ಹಿಂಪಡೆಯುವ ಅರ್ಜಿಗೂ ದರ್ಶನ್ ಸಹಿ ಹಾಕಿದರು. ಮಧ್ಯಂತರ ಜಾಮೀನು ವೇಳೆ ಪಾಸ್ ಪೋರ್ಟ್ ಸರಂಡರ್ ಮಾಡುವಂತೆ ಷರತ್ತು ವಿಧಿಸಲಾಗಿತ್ತು. ಆದರೆ ನಂತರ ರೆಗ್ಯುಲರ್ ಜಾಮೀನಿನಲ್ಲಿ ಈ ಷರತ್ತು ಇಲ್ಲದ ಕಾರಣ ಪಾಸ್ ಪೋರ್ಟ್ ಹಿಂತಿರುಗಿಸಲು ಕೋರ್ಟ್ ಸಮ್ಮತಿ ನೀಡಿದೆ. ಕಳೆದ ವಾರ ಹೈಕೋರ್ಟ್ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿದಂತೆ ಎಲ್ಲರಿಗೂ ಜಾಮೀನು ಮಂಜೂರು ಮಾಡಿತ್ತು.
ಕೃಷಿ ಹೊಂಡಕ್ಕೆ ಸೋಡಿಯಂ ಮೆಟಲ್ ಎಸೆದು ಬ್ಲಾಸ್ಟ್ ಮಾಡಿದ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕನ್ನಡದ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ನನ್ನು ಮಧುಗಿರಿ ಕೋರ್ಟ್ ಇಂದು 10 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಮಧುಗಿರಿಯ JMFC ಕೋರ್ಟ್ ಗೆ ಹಾಜರುಪಡಿಸಿದರು. ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್, ಡಿಸೆಂಬರ್ 26ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಮಧುಗಿರಿ ತಾಲೂಕಿನ ಜನಕಲೋಟಿ ಬಳಿ ಕೃಷಿ ಹೊಂಡಕ್ಕೆ ಸೋಡಿಯಂ ಎಸೆದು ಸ್ಫೋಟಿಸಿದ ಆರೋಪದ ಮೇಲೆ ಕಳೆದ ಗುರುವಾರ ಡ್ರೋನ್ ಪ್ರತಾಪ್ ನನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಜನವರಿ 1ರಿಂದ ಮಾರ್ಚ್ 15ರವರೆಗೆ ಅಂದರೆ ಎರಡೂವರೆ ತಿಂಗಳ ಕಾಲ ಪ್ರವೇಶ ನಿರ್ಬಂಧಿಸಲಾಗಿದೆ. ಜೋಗ ಜಲಪಾತದ ಮುಖ್ಯದ್ವಾರ ಮತ್ತು ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳ ಕಾಲ ಪ್ರವಾಸಿಗರ ವೀಕ್ಷಣೆಗೆ ನಿರ್ಬಂಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.