ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನ (IIMB) ನಿರ್ದೇಶಕರು, ಡೀನ್ ಹಾಗೂ ಇತರ ಆರು ಅಧ್ಯಾಪಕರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ, ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ನವೆಂಬರ್ 26 ರಂದು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಸಲ್ಲಿಸಿದ ವರದಿಯಿಂದ ಈ ವಿಷಯ ತಿಳಿದು ಬಂದಿದೆ. ನಿರ್ದೇಶಕ ಡಾ ರಿಷಿಕೇಶ ಟಿ ಕೃಷ್ಣನ್ ಮತ್ತು ಡೀನ್ ಡಾ ದಿನೇಶ್ ಕುಮಾರ್ ಸೇರಿದಂತೆ ಐಐಎಂಬಿಯ ಹಲವರಿಂದ ಜಾತಿ ದೌರ್ಜನ್ಯ ನಡೆದಿದೆ ಎಂದು ದೃಢವಾಗಿದೆ. ಡಿಸೆಂಬರ್ 9 ರಂದು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲಾಖೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿತ್ತು. ಆದರೆ, ಇನ್ನೂ ಕ್ರಮ ಕೈಗೊಂಡಿಲ್ಲ. 2018 ರಲ್ಲಿ ಐಐಎಂಬಿಗೆ ಮಾರ್ಕೆಟಿಂಗ್‌ನ ಸಹ ಪ್ರಾಧ್ಯಾಪಕರಾಗಿ ಸೇರ್ಪಡೆಗೊಂಡ ಗೋಪಾಲ್ ದಾಸ್ ಅವರು ದೂರು ನೀಡಿದ ನಂತರ ತನಿಖೆ ಆರಂಭಿಸಲಾಗಿದೆ. ಇವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದರೂ, ಅವರು ಎಂದಿಗೂ ಮೀಸಲಾತಿ ಪ್ರಯೋಜನಗಳನ್ನು ಬಯಸಲಿಲ್ಲ ಮತ್ತು ಅರ್ಹತೆಯ ಆಧಾರದ ಮೇಲೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಲಾಗುತ್ತದೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಿಂದ ಸತತ ಐದು ವರ್ಷಗಳ ಕಾಲ ವಿಶ್ವದ ಅಗ್ರ ಶೇ 2 ರಷ್ಟು ಪ್ರಾಧ್ಯಾಪಕರಲ್ಲಿ ಒಬ್ಬರಾಗಿ ದಾಸ್ ಗುರುತಿಸಲ್ಪಟ್ಟಿದ್ದಾರೆ. ಸಂಸ್ಥೆಯೊಳಗಿನ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಬಗ್ಗೆ ಭರವಸೆ ನೀಡಿದ್ದರು.
ಕೃಷ್ಣನ್ ಮತ್ತು ದಿನೇಶ್ ಕುಮಾರ್ ಅವರು ಸಾಮೂಹಿಕ ಇಮೇಲ್‌ಗಳ ಮೂಲಕ ದಾಸ್‌ನ ಜಾತಿ ಗುರುತನ್ನು ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ, ಇದು ತಾರತಮ್ಯ ಮತ್ತು ಪ್ರತಿಕೂಲವಾದ ಕೆಲಸದ ವಾತಾವರಣವನ್ನು ಸೃಷ್ಟಿಸಲು ಕಾರಣವಾಗಿದೆ. SC/ST ಸದಸ್ಯರಿಗೆ ಕಾನೂನು ಮೂಲಕ ದೂರು ಪರಿಹಾರ ಕಾರ್ಯವಿಧಾನವನ್ನು ನಿರ್ವಹಿಸಲು IIMB ವಿಫಲವಾಗಿದೆ ಎಂದು DCRE ತಿಳಿಸಿದೆ.
ಡಾಕ್ಟರೇಟ್ ವಿದ್ಯಾರ್ಥಿಗಳು ನೀಡಿದ ಕಿರುಕುಳದ ದೂರುಗಳಿಂದ ದಾಸ್ ಅವರ ಬಡ್ತಿಯನ್ನು ಸ್ಥಗಿತಗೊಳಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಈ ಪ್ರಕರಣ ಬಗ್ಗೆ ತನಿಖೆಯನ್ನು ಪ್ರಾರಂಭಿಸಿತು, ತನಿಖಾ ಸಮಿತಿಯಲ್ಲಿ ಎಸ್‌ಸಿ ವರ್ಗದ ಸದಸ್ಯ ಸೇರಿದ್ದಾರೆ. ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಅವರ ಆಯ್ಕೆಯ ಕೋರ್ಸ್‌ಗಳನ್ನು ಕಲಿಸಲು ದಾಸ್ ಅವರಿಗೆ ಅವಕಾಶ ನೀಡಲಾಗಿದೆ. ಪ್ರಮಾಣಿತ ಸಾಂಸ್ಥಿಕ ಕಾರ್ಯವಿಧಾನಗಳನ್ನು ಅನುಸರಿಸಿ ಕಿರುಕುಳದ ದೂರುಗಳನ್ನು ಪರಿಹರಿಸುವ ಅಗತ್ಯತೆಯಿಂದಾಗಿ ಅವರ ಬಡ್ತಿಯಲ್ಲಿ ವಿಳಂಬವಾಗಿದೆ ಎಂದು IIMB ಪ್ರತಿಪಾದಿಸಿದೆ.
ಅವರ ಬಡ್ತಿ ವಿಳಂಬವಾದ ನಂತರವೇ ಜಾತಿ ಆಧಾರಿತ ತಾರತಮ್ಯದ ಆರೋಪಗಳು ಹೊರಬಂದವು ಎಂದು ಐಐಎಂಬಿ ಹೇಳಿದೆ. ನಿಯಮಿತ ಶೈಕ್ಷಣಿಕ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಅವರ ಬಡ್ತಿಯನ್ನು ತಡೆಹಿಡಿಯಲಾಗಿದೆಯೇ ಹೊರತು ವೈಯಕ್ತಿಕ ಪಕ್ಷಪಾತದಿಂದಲ್ಲ ಎಂದು ಸಂಸ್ಥೆಯು ಸ್ಪಷ್ಟಪಡಿಸಿದೆ. ಡಿಸಿಆರ್‌ಇ ವರದಿಯ ಪ್ರತಿಯನ್ನು ಇನ್ನೂ ಸ್ವೀಕರಿಸಬೇಕಾಗಿದ್ದರೂ, ಡಿಸಿಆರ್‌ಇಗೆ ಎಲ್ಲಾ ಪುರಾವೆಗಳನ್ನು ಒದಗಿಸಿದೆ ಎಂದು ಐಐಎಂಬಿ ಹೇಳಿದೆ. ಐಐಎಂಬಿಯಲ್ಲಿನ ವೈವಿಧ್ಯತೆ ಮತ್ತು ಸೇರ್ಪಡೆ ಕುಂದುಕೊರತೆ ಪರಿಹಾರ ಸಮಿತಿಯು ದಾಸ್ ಅವರ ಕಿರುಕುಳ ಮತ್ತು ತಾರತಮ್ಯದ ಆರೋಪಗಳನ್ನು ತಳ್ಳಿಹಾಕಿದೆ, ಅವುಗಳನ್ನು ಆಧಾರರಹಿತ ಎಂದು IIMB ಸಮರ್ಥಿಸಿಕೊಂಡಿದೆ.