ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ಹೊಂದಿರುವಂತಹ ಎಲ್ಲ ನಾಗರೀಕರು ದಾಖಲೆಗಳ ಒದಹಗಿಸಿ ಇ-ಖಾತಾ ಪಡೆಯದುಕೊಳ್ಳುವಂತೆ ಪಾಲಿಕೆ ಮನವಿ ಮಾಡಿಕೊಂಡಿದೆ.
ಇ–ಖಾತಾ ವ್ಯವಸ್ಥೆ ಸ್ವಯಂಚಾಲಿತ ಪ್ರಕ್ರಿಯೆಯಾಗಿದ್ದು, ಯಾವುದೇ ದಾಖಲೆಯನ್ನು ಪಡೆಯದೆ ಅಂತಿಮ ಇ–ಖಾತಾ ನೀಡುವ ಪ್ರಕ್ರಿಯೆಯ ಮೇಲೆ ಪಾಲಿಕೆ ಅಧಿಕಾರಿಗಳಿಗೆ ಯಾವುದೇ ರೀತಿಯ ನಿಯಂತ್ರಣ ಅಥವಾ ಅಧಿಕಾರ ಇರುವುದಿಲ್ಲ. ಆದ್ದರಿಂದ, ಪಾಲಿಕೆ ನಿಗದಿಪಡಿಸಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಮಾಲೀಕರು ಇ–ಖಾತಾ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮಾಲೀಕರು ತಮ್ಮ ಆಧಾರ್ ಕಾರ್ಡ್, ಆಸ್ತಿ ತೆರಿಗೆ ಐಡಿ, ಮಾರಾಟ/ ರಿಜಿಸ್ಟರ್ ಡೀಡ್ ಸಂಖ್ಯೆ, ಬೆಸ್ಕಾಂ ಖಾತೆಯ ಸಂಖ್ಯೆ (ಖಾಲಿ ನಿವೇಶನವಿದ್ದರೆ ಅಗತ್ಯವಿಲ್ಲ) ಹಾಗೂ ಆಸ್ತಿ ಫೋಟೊವನ್ನು ಅಪ್‌ಲೋಡ್ (BBMPeAasthi.karnataka.gov.in) ಮಾಡಬೇಕಿದೆ. ಈ ಎಲ್ಲ ದಾಖಲೆಗಳು ಬಿಬಿಎಂಪಿ ಯಲ್ಲಿರುವ ದಾಖಲೆಗಳೊಂದಿಗೆ ಹೊಂದಾಣಿಕೆಯಾದರೆ ಕೂಡಲೇ ಅಂತಿಮ ಇ–ಖಾತಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾವುದಾದರೂ ದಾಖಲೆಯಲ್ಲಿ ವ್ಯತ್ಯಾಸವಿದ್ದರೆ ಅಥವಾ ಕೊರತೆ ಇದ್ದರೆ ಸಹಾಯಕ ಕಂದಾಯ ಅಧಿಕಾರಿಗೆ ಅರ್ಜಿ ವರ್ಗಾವಣೆಯಾಗಲಿದ್ದು, ಅವರನ್ನು ಭೇಟಿ ಮಾಡಿ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಯೂಟ್ಯೂಬ್‌ನಲ್ಲಿ (https://m.youtube.com/watch?v=JR3BxET46po) ಇ–ಖಾತಾ ಪಡೆಯುವ ಮಾಹಿತಿ ನೀಡಲಾಗಿದೆ. ಅಲ್ಲದೆ, ಇ–ಖಾತಾ ಸಹಾಯವಾಣಿ 94806 83695 ಕರೆ ಮಾಡಿ ಸಲಹೆ ಪಡೆಯಬಹುದು ಎಂದು ಹೇಳಲಾಗಿದೆ.
ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ಇ-ಖಾತಾ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಅಂತಿಮ ಇ-ಖಾತಾ ಪಡೆಯಲು ಅಂದಾಜು ಇಲ್ಲಿಯ ವರೆಗೆ 67 ಸಾವಿರ ಅರ್ಜಿಗಳು ಬಂದಿವೆ. ಅವುಗಳಲ್ಲಿ 61 ಸಾವಿರಕ್ಕೂ ಹೆಚ್ಚು ಇ-ಖಾತಾಗಳನ್ನು ನೀಡಲಾಗಿದೆ. ಇನ್ನು ದಿನವೂ ಬರುತ್ತಿರುವ ಇ ಖಾತಾಗೆ ಸಂಬಂಧಿಸಿದ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಇ-ಖಾತ ಸಿಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.