2025 ವರ್ಷವನ್ನು ಸ್ವಾಗತಿಸಲು ಕೆಲವೇ ದಿನ ಬಾಕಿಯಿರುವಂತೆಯೇ ಹೊಸ ವರ್ಷ ಸಂಭ್ರಮಾಚರಣೆಗಾಗಿ ಜನರು ಹೆಚ್ಚಾಗಿ ಸೇರುವ ಕಡೆಗಳಲ್ಲಿ ಜನರು ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ನಗರದ ಪೊಲೀಸರು ವ್ಯಾಪಕವಾದ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಪ್ರತಿ ವರ್ಷದಂತೆ ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಿಂದಿನ ವರ್ಷದ ಘಟನೆಗಳು ಮತ್ತು ಅನುಭವದ ಆಧಾರದ ಮೇಲೆ ಹೆಚ್ಚಿನ ಭದ್ರತೆ ಕೈಗೊಂಡಿದ್ದೇವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಪ್ರದೇಶಗಳನ್ನು ನಾವು ಗುರುತಿಸಿದ್ದೇವೆ. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಜಂಕ್ಷನ್, ಕೋರಮಂಗಲ, ಇಂದಿರಾನಗರ ಮತ್ತಿತರ ಕಡೆಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಜನರಿಗೆ ಅನುಕೂಲವಾಗುಂತೆ ಮೆಟ್ರೋ ತನ್ನ ಸೇವೆಯನ್ನು ಜನವರಿ 1ರ ಮುಂಜಾನೆ 2 ಗಂಟೆಯವರೆಗೂ ವಿಸ್ತರಿಸಿದೆ. ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಕಾರಣ ಡಿ.31ರಂದು ರಾತ್ರಿ 11ಗಂಟೆಯಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ. ಹೀಗಾಗಿ ಪ್ರಯಾಣಿಕರ ಮೆಟ್ರೋ ರೈಲಿಗಾಗಿ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ಹೋಗಬೇಕು ಎಂದು BMRCL ಮಾಹಿತಿ ನೀಡಿದೆ.
ಮಾಜಿ ಸಂಸದ ಡಿ.ಕೆ ಸುರೇಶ್ ತಂಗಿ ಎಂದು ಹೇಳಿಕೊಂಡು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಿಗೆ 9 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಖರೀದಿಸಿ ವಂಚನೆ ಮಾಡಿದ ಆರೋಪ ಪ್ರಕರಣ ಸಂಬಂಧ ಐಶ್ವರ್ಯ ಗೌಡ ಮತ್ತು ಆಕೆಯ ಪತಿ ಹರೀಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಐಶ್ವರ್ಯಗೌಡ ಮತ್ತು ಹರೀಶ್ ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮತ್ತೊಂದೆಡೆ ಪ್ರಕರಣದಲ್ಲಿ ಡಿಕೆ ಸುರೇಶ್ ಧ್ವನಿಯಲ್ಲಿ ಮಾತನಾಡಿದ್ದ ನಟ ಧರ್ಮೇಂದ್ರಗೆ ಬಂಧನ ಭೀತಿ ಎದುರಾಗಿದ್ದು ಸದ್ಯ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೀದರ್‌ನ 26 ವರ್ಷದ ಗುತ್ತಿಗೆದಾರ ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಗುಂಜ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಹೆಡ್ ಕಾನ್‌ಸ್ಟೆಬಲ್‌ಗಳಾದ ರಾಜೇಶ್ ಚೆಲ್ವಾ ಮತ್ತು ಶಾಮಲಾ ಅವರನ್ನು ಮೃತನ ಕುಟುಂಬಸ್ಥರ ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಅಮಾತನು ಮಾಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಮಾಜಿ ಕಾರ್ಪೊರೇಟರ್ ರಾಜು ಕಪನೂರು ವಿರುದ್ಧ ಗಂಭೀರ ಆರೋಪ ಮಾಡಿ ಸಚಿನ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದರು.
ಹುಬ್ಬಳ್ಳಿಯಲ್ಲಿ ಕುಖ್ಯಾತ ಚಡ್ಡಿ ಗ್ಯಾಂಗ್ ನ ಅಂತಾರಾಜ್ಯ ದರೋಡೆಕೋರ ವೆಂಕಟೇಶ್ವರ ರಾವ್ ಎಂಬಾತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. 4 ರಾಜ್ಯಗಳಲ್ಲಿ 50 ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ನವಲೂರಿನಲ್ಲಿ ವಿಕಾಸ ಕುಮಾರ್ ಎಂಬುವವರ ಮನೆಯ ಬಾಗಿಲಿಗೆ ಸೈಜ್ ಕಲ್ಲಿನಿಂದ ಹೊಡೆದು ಮನೆಯೊಳಗೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧ ಕೇಳಿಬಂದಿರುವ ಅತ್ಯಾಚಾರ, ಹನಿಟ್ರ್ಯಾಪ್ ಹಾಗೂ ಅಪಾಯಕಾರಿ ರೋಗ ಹರಡುವಿಕೆ ಆರೋಪ ತನಿಖೆಯಲ್ಲಿ ರಜುವಾತಾಗಿದೆ ಎಂದು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಿಐಡಿ ವಿಶೇಷ ತನಿಖಾ ತಂಡ ಆರೋಪ ಪಟ್ಟಿ ಸಲ್ಲಿಸಿದೆ. ತಮ್ಮ ವಿರೋಧಿಗಳನ್ನುHIV- Aids ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕ ಮುನಿರತ್ನ ದುಷ್ಕೃತ್ಯ ಎಸಗಿದ್ದರು ಎಂದು ಎಸ್ಐಟಿ ಸಲ್ಲಿಸಿದ chargesheet ನಲ್ಲಿ ಉಲ್ಲೇಖವಾಗಿದೆ. ಶಾಸಕ ಮುನಿರತ್ನ ಕೃತ್ಯಕ್ಕೆ ನೆರವು ನೀಡಿದ ಆರೋಪದ ಹೊತ್ತಿದ್ದ ಪ್ರಕರಣದ ಎ3 ಸುಧಾಕರ್, ಎ7 ಪಿ.ಶ್ರೀನಿವಾಸ್ ಮತ್ತು ಎ8 ಇನ್ಸ್ ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ಧ ದಾಖಲಾದ ಆಪಾದನೆ ಕೂಡ ತನಿಖೆಯಲ್ಲಿ ಸಾಬೀತಾಗಿದೆ. ಸದ್ಯ ಇನ್ಸ್ ಪೆಕ್ಟರ್ ಬಿ. ಐಯ್ಯಣ್ಣ ರೆಡ್ಡಿಯನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ.