ಬೆಂಗಳೂರು: ಆಗಸ್ಟ್ ಯಿಂದ ನವೆಂಬರ್ ವರೆಗೂ ಕೇವಲ ನಾಲ್ಕು ತಿಂಗಳಲ್ಲಿ 217 ಪ್ರಕರಣಗಳೊಂದಿಗೆ ಈ ವರ್ಷದ ನವೆಂಬರ್ ವರೆಗೂ ರಾಜ್ಯದಲ್ಲಿ 348 ಬಾಣಂತಿಯರ ಸಾವು ದಾಖಲಾಗಿದೆ. ಈ ಪೈಕಿ 179 ಮಂದಿ ಸರ್ಕಾರಿ ಆಸ್ಪತ್ರೆಗಳು ಹಾಗೂ 38 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ. ಆಗಸ್ಟ್ ಮತ್ತು ನವೆಂಬರ್ ನಡುವೆ ರಾಜ್ಯದಲ್ಲಿ ಪ್ರತಿ ತಿಂಗಳು 50 ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ವರದಿಯಾಗಿವೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ನಂತರ ರಿಂಗರ್ಸ್ ಲ್ಯಾಕ್ಟೇಟ್ IV ದ್ರಾವಣ ಪರಿಶೀಲನೆಗೆ ಒಳಪಟ್ಟಿದ್ದು, ಹೆರಿಗೆ ವೇಳೆ ಅತ್ಯಧಿಕ ರಕ್ತ ಸ್ರಾವ, ಅಂಟಿಬಯೋಟಿಕ್ , ವೃತ್ತಿಪರ ವೈದ್ಯರ ಕೊರತೆ ಮತ್ತಿತರ ಕಾರಣಗಳಿರಬಹುದು ಎಂದು ತಜ್ಞರು ಪ್ರತಿಪಾದಿಸುತ್ತಾರೆ. ರಿಂಗರ್ಸ್ ಲ್ಯಾಕ್ಟೇಟ್ ಮಾತ್ರ ಕಾರಣ ಅಂತಾ ಪರಿಗಣಿಸಬಾರದು, ಮತ್ತಿತರ ಅಂಶಗಳನ್ನು ಪರಿಗಣಿಸಬೇಕು. ಸಾವಿಗೆ ನಿಜವಾದ ಕಾರಣ ತಿಳಿಯಲು ಒಟ್ಟಾರೇ ಚಿಕಿತ್ಸಾ ಪ್ರಕ್ರಿಯೆ ಮತ್ತು ಆಧಾರವಾಗಿರುವ ವೈದ್ಯಕೀಯ ಪರಿಸ್ಥಿತಿಗಳ ವಿವರವಾದ ತನಿಖೆಯ ಅಗತ್ಯವಿದೆ ಎಂದು BMCRI ಯ ತುರ್ತು ಮತ್ತು ಕ್ರಿಟಿಕಲ್ ಕೇರ್ ಮುಖ್ಯಸ್ಥ ಡಾ.ಜಿ.ಹೆಚ್. ರಮೇಶ್ ಹೇಳುತ್ತಾರೆ.
ದ್ರಾವಣ ರಕ್ತ ಪ್ರವೇಶಿಸಿದ ಕೂಡಲೇ ಅಲರ್ಜಿ:
ರಿಂಗರ್ಸ್ ಲ್ಯಾಕ್ಟೇಟ್ ನಂತಹ IV ದ್ರಾವಣಗಳು ಒಂದು ವೇಳೆ ಅವಧಿ ಮುಗಿದಿದ್ದರೆ ಅಥವಾ ಅಸಮರ್ಕವಾಗಿ ಅವುಗಳನ್ನು ಪೂರೈಸಿದ್ದರೆ, ಆ ದ್ರಾವಣ ಬಾಣಂತಿಯರ ರಕ್ತ ಪ್ರವೇಶಿಸಿದ ಕೂಡಲೇ ಅಲರ್ಜಿ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.ಇದು ಹಠಾತ್ ಹೃದಯರಕ್ತನಾಳದ ಕುಸಿತ, ಉಸಿರಾಟದ ತೊಂದರೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದಲ್ಲದೆ ಪ್ರಸವಾನಂತರದ ರಕ್ತಸ್ರಾವವು ತಾಯಿಯ ಮರಣಕ್ಕೆ ಪ್ರಮುಖ ಕಾರಣವೂ ಆಗಬಹುದು ಎಂದು ಅವರು ಹೇಳಿದರು.
ಪ್ರಯಾಣದ ಅವಧಿಯಲ್ಲಿ ಸರಿಯಾದ ಆರೈಕೆ ಮಾಡದಿರುವುದು:
ಬಡ ಹಿನ್ನೆಲೆಯ ಮತ್ತು ಜಿಲ್ಲಾ ಕೇಂದ್ರಗಳಿಂದ ಬರುವ ಬಾಣಂತಿಯರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಅವರು ಪ್ರಯಾಣಿಸಬೇಕಾಗಿರುವುದರಿಂದ ಅನೇಕರಿಗೆ ಆರೈಕೆ ಇರುವುದಿಲ್ಲ. ಇದು ಗಂಭೀರ ತೊಡಕುಗಳಿಗೆ ಕಾರಣವಾಗುತ್ತದೆ. ಮೂರನೇ ಅಥವಾ ಅದಕ್ಕಿಂತ ಹೆಚ್ಚಿನ ಮಗುವನ್ನು ಹೊಂದುವ ಮಹಿಳೆಯರಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ರಕ್ತಹೀನತೆ ಸಮಸ್ಯೆಗೆ ಕಿವಿಗೂಡದ ಮಹಿಳೆಯರು:
ಸರ್ಕಾರಿ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನು ವಿವರಿಸಿದ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಸಿ, ಪ್ರಸವಪೂರ್ವ ಅಥವಾ ಗರ್ಭಧಾರಣೆಯ ಸಂಬಂಧಿತ ಆರೈಕೆಗಾಗಿ ಮಹಿಳೆಯರಿಗೆ ವಾರಕ್ಕೆ ಮೂರು ಬಾರಿ ಭೇಟಿ ನೀಡುವಂತೆ ಸೂಚಿಸಲಾಗಿದೆ, ಆದರೆ ಅನೇಕರು ಹಾಜರಾಗುವುದಿಲ್ಲ. ಇದಲ್ಲದೆ, ಹೆಚ್ಚಿನ ತಾಯಿಯ ಸಾವುಗಳು ರಕ್ತಹೀನತೆಯಿಂದ ಸಂಭವಿಸುತ್ತವೆ ಎಂದು ತಿಳಿಸಿದರು.
ಅಲ್ಲದೇ ಕಬ್ಬಿಣಾಂಶ ಪೂರೈಕೆ ಮಾತ್ರೆ ಅಥವಾ ಇಂಜಿಕ್ಷನ್ ಗಳನ್ನು ಮಹಿಳೆಯರು ತೆಗೆದುಕೊಳ್ಳದ ಕಾರಣ ರಕ್ತಹೀನತೆ ಸಮಸ್ಯೆ ಹಾಗೆಯೇ ಉಳಿಯುತ್ತದೆ. ಪ್ರಸವಪೂರ್ವ ಭೇಟಿಗಳ ಮೂಲಕ ಗರ್ಭಿಣಿಯರನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದರಿಂದ ಅಪಾಯಗಳನ್ನು ಗುರುತಿಸಬಹುದು ಮತ್ತು ಆರಂಭಿಕವಾಗಿಸಾವಿಗೆ ಕಾರಣವಾಗುವ ತೊಡಕುಗಳನ್ನು ತಡೆಯಬಹುದು ಎಂದು ಅವರು ಹೇಳಿದರು.
ವೃತ್ತಿಪರ ಆರೋಗ್ಯ ಕಾರ್ಯಕರ್ತೆಯರ ಕೊರತೆ:
ಸರ್ಕಾರಿ ಆಸ್ಪತ್ರೆಗಳಲ್ಲಿನ ತರಬೇತಿ ಪಡೆಯದ ಆರೋಗ್ಯ ಸಿಬ್ಬಂದಿ, ನಿರ್ಲಕ್ಷ್ಯ ಬಾಣಂತಿಯರ ಸಾವಿನಲ್ಲಿ ಪ್ರಮುಖ ಅಂಶವಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಅಸಮರ್ಪಕ ತರಬೇತಿ ಮತ್ತು ಅನುಭವದ ಕೊರತೆಯು ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ಸಮಯದಲ್ಲಿ ಸಮಸ್ಯೆಗಳನ್ನು ಗುರುತಿಸಿ ನಿರ್ವಹಿಸುವಲ್ಲಿ ವಿಳಂಬಕ್ಕೆ ಕಾರಣವಾಗಬಹುದು. ಇದರಿಂದಾಗಿ ಸಾವುಗಳು ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರೊಬ್ಬರು ತಿಳಿಸಿದರು.