ಮಂಡ್ಯ: ಪ್ರೀತಿಸುತ್ತಿದ್ದ ಹುಡುಗಿಯ ಮನೆಯವರು ನಿರಾಕರಿಸಿದ್ದರಿಂದ ಮನನೊಂದ 21 ವರ್ಷದ ಯುವಕ ಆ ಮನೆಯ ಮುಂದೆಯೇ ಜಿಲೆಟಿನ್ ಸ್ಟಿಕ್‌ನಿಂದ ಸ್ಫೋಟಿಸಿಕೊಂಡು ಸಾವಿಗೀಡಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ರಾಮಚಂದ್ರ ಎಂಬಾತ ಅಪ್ರಾಪ್ತ ಬಾಲಕಿಯೊಂದಿಗೆ ಸಂಬಂಧ ಹೊಂದಿದ್ದ. ಕಳೆದ ವರ್ಷ, ಆತ ಬಾಲಕಿಯೊಂದಿಗೆ ಓಡಿಹೋದ ನಂತರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಬಂಧಿತನಾಗಿ ಮೂರು ತಿಂಗಳು ಜೈಲುವಾಸ ಅನುಭವಿಸಿದ್ದ. ಜೈಲಿನಿಂದ ಹೊರಬಂದ ನಂತರ ಬಾಲಕಿಯ ಮನೆಯವರೊಂದಿಗೆ ರಾಜಿ ಮಾಡಿಕೊಂಡಿದ್ದು, ನ್ಯಾಯಾಲಯದಲ್ಲಿ ಪ್ರಕರಣವನ್ನು ಹಿಂಪಡೆಯಲಾಗಿತ್ತು. ಆದರೆ, ಆತ ಬಾಲಕಿಗೆ ಮತ್ತೆ ಕರೆ ಮಾಡಲು ಪ್ರಾರಂಭಿಸಿದ್ದ ಮತ್ತು ಆಕೆಯೊಂದಿಗೆ ತನ್ನ ಸಂಬಂಧವನ್ನು ಮುಂದುವರೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ, ಬಾಲಕಿಯ ಕುಟುಂಬವು ಹುಡುಗಿಗೆ ಕಾನೂನುಬದ್ಧ ವಯಸ್ಸು ಆದ ಬಳಿಕ ಬೇರೊಬ್ಬರೊಂದಿಗೆ ಮದುವೆ ಮಾಡಲು ಯೋಜಿಸುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದರಿಂದ ನಾಗಮಂಗಲ ತಾಲ್ಲೂಕಿನ ಪಕ್ಕದ ಗ್ರಾಮದ ರಾಮಚಂದ್ರ ಎಂಬಾತ ಬಾಲಕಿಯ ಮನೆಯವರೊಂದಿಗೆ ಅಸಮಾಧಾನಗೊಂಡಿದ್ದ ಎನ್ನಲಾಗಿದೆ. ಭಾನುವಾರ ಇದ್ದಕ್ಕಿದ್ದಂತೆ, ಆತ ಬಾಲಕಿಯ ಮನೆಯ ಮುಂದೆ ಬಂದಿದ್ದಾನೆ ಮತ್ತು ತಾನು ತಂದಿದ್ದ ಜಿಲೆಟಿನ್ ಸ್ಟಿಕ್ ಅನ್ನು ಸ್ಫೋಟಿಸಿದ್ದಾನೆ. ಸ್ಫೋಟದಲ್ಲಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತನ ಕುಟುಂಬ ಕಲ್ಲುಗಣಿಗಾರಿಕೆ ವ್ಯವಹಾರ ನಡೆಸುತ್ತಿದ್ದು, ಹೀಗಾಗಿಯೇ ಆತನಿಗೆ ಜಿಲೆಟಿನ್ ಕಡ್ಡಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.