ರಾಜ್ಯ

ಉತ್ತರ ಕನ್ನಡ ಜಿಲ್ಲೆಯಲ್ಲಿ 31 ಮಂಗನ ಕಾಯಿಲೆ ಪ್ರಕರಣ ವರದಿ

Lingaraj Badiger

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮಂಗನ ಕಾಯಿಲೆಯಿಂದ ಬಳಲುತ್ತಿರುವ ಮೂವತ್ತೊಂದು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಸೋಂಕಿತರಲ್ಲಿ 12 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಸ್ಥಿರವಾಗಿದ್ದು, ಇದುವರೆಗೆ ಯಾವುದೇ ಗಂಭೀರ ಪ್ರಕರಣ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ಸಿದ್ದಾಪುರ ತಾಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ಮಂಗನ ಕಾಯಿಲೆ ಎಂದೂ ಕರೆಯಲ್ಪಡುವ ಕ್ಯಾಸನೂರು ಅರಣ್ಯ ಕಾಯಿಲೆ(ಕೆಎಫ್‌ಡಿ)ಯ ಮೊದಲ ಪ್ರಕರಣ ಜನವರಿ 16 ರಂದು ವರದಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮಂಗಗಳ ಮೇಲೆ ಸಾಮಾನ್ಯವಾಗಿ ಬದುಕುಳಿಯುವ ಉಣ್ಣಿಗಳ ಕಡಿತದಿಂದ ಈ ಮಂಗನ ಕಾಯಿಲೆ ಹರಡುತ್ತದೆ.

ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ವಾಸಿಸುವವರಿಗೆ ಈ ಕಾಯಿಲೆ ಬರುವ ಅಪಾಯ ಹೆಚ್ಚಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಒಮ್ಮೆ ಮಂಗನ ಕಾಯಿಲೆ ಬಂದರೆ ಮುಂದಿನ ಮೂರರಿಂದ ಐದು ದಿನಗಳ ಕಾಲ ತೀವ್ರ ಜ್ವರ, ತೀವ್ರ ಮೈಕೈ ನೋವು, ತಲೆನೋವು, ಕಣ್ಣು ಕೆಂಪಾಗುವುದು, ನೆಗಡಿ ಮತ್ತು ಕೆಮ್ಮು ಕಾಣಿಸಿಕೊಳ್ಳುತ್ತದೆ ಎಂದು ಉತ್ತರ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ ಅವರು ಹೇಳಿದ್ದಾರೆ.

SCROLL FOR NEXT