ರಾಜ್ಯ

ಸಿದ್ದಗಂಗಾ ಶ್ರೀಗಳಿಗೂ ಭಾರತ ರತ್ನ ನೀಡಿ: ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಒತ್ತಾಯ

Sumana Upadhyaya

ದಾವಣಗೆರೆ: ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆಯಾದ ಬೆನ್ನಲ್ಲೇ ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೂ ದೇಶದ ಅತ್ಯುನ್ನತ ನಾಗರಿಕ ಗೌರವ ಸಿಗಬೇಕೆಂಬ ಸಿಗಬೇಕೆಂದು ಸಿಎಂ ಸಿದ್ದರಾಮಯ್ಯ ಮತ್ತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. 

ನಿನ್ನೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್‌.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಕೊಡಲಿ ಬಿಡಿ ಪಾಪ, ಕೊಡಬೇಡಿ ಅಂದವರು ಯಾರು, ಆದರೆ ಸಿದ್ದಗಂಗಾ ಶ್ರೀಗಳಿಗೂ ಭಾರತ ರತ್ನ ಪ್ರಶಸ್ತಿ ಸಿಗುವ ಅರ್ಹತೆಯಿದೆ. ಸಿದ್ಧಗಂಗಾ ಶ್ರೀಗಳಿಗೂ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ನಾವು ಪತ್ರಬರೆದಿದ್ದೆವು, ಅವರಿಗೆ ಇಂಥ ಉದಾತ್ತವಾದ ನಾಗರಿಕ ಪ್ರಶಸ್ತಿ ಸಿಕ್ಕರೆ ಸಂತೋಷ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಡಿ ಕೆ ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಮನವಿ:  ಬಿಜೆಪಿ ಧುರೀಣರಾದ ಎಲ್.ಕೆ. ಅಡ್ವಾಣಿಯವರಿಗೆ ಭಾರತ ರತ್ನ ನೀಡಿರುವ ಕೇಂದ್ರದ ಕ್ರಮವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದ್ದಾರೆ. ಇದೇ ವೇಳೆ, ಕರ್ನಾಟಕದ ಮನವಿಯಂತೆ ಸಿದ್ದಗಂಗಾ ಶ್ರೀಗಳಿಗೂ ಭಾರತ ರತ್ನ ನೀಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.

ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಮೂಲ ನಂದಿ ದೇಗುಲಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿ, ಶಿವಲಿಂಗ-ಮೂಲ ನಂದೀಶ್ವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡ್ವಾಣಿಯವರು ದೇಶದಲ್ಲಿ ಹಿರಿಯ ರಾಜಕಾರಣಿ. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರು ಇಲ್ಲ. ಕೇಂದ್ರ ಸರಕಾರದ ತೀರ್ಮಾನಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿದ್ದರೆ ಚೆನ್ನಾಗಿರುತ್ತಿತ್ತು, ಎಂದು ಹೇಳಿದರು.

SCROLL FOR NEXT