ರಾಜ್ಯ

ಮಾವೋವಾದಿಗಳ ಚಲನವಲನ: ಕರಾವಳಿಯಲ್ಲಿ ಹೈ ಅಲರ್ಟ್!

Srinivasamurthy VN

ಉಡುಪಿ: ಕರ್ನಾಟಕದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಮಾವೋವಾದಿಗಳ ಚಲನವಲನ ಕಂಡುಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ವಿಕ್ರಮ್ ಗೌಡ ನೇತೃತ್ವದ ಮಾವೋವಾದಿಗಳ ತಂಡ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಿಗೆ ಬಂದಿದ್ದಾರೆ. ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮಗಳ ಮನೆಗಳಿಗೆ ಮಾವೋವಾದಿ ತಂಡ ಭೇಟಿ ನೀಡಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಈ ಮಾಹಿತಿ ಮೇರೆಗೆ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್) ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದೆ. 

ಫೆಬ್ರವರಿ 5, 2005 ರಂದು ಕರ್ನಾಟಕ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಪ್ರಮುಖ ಮಾವೋವಾದಿ ನಾಯಕ ಸಾಕೇತ್ ರಾಜನ್ ಅವರ ನೆನಪಿಗಾಗಿ ಮಾವೋವಾದಿಗಳು 'ರೆಡ್ ಸೆಲ್ಯೂಟ್ ಡೇ' ಆಚರಿಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾವೋ ನಾಯಕ ವಿಕ್ರಮ್ ಗೌಡನನ್ನು ಹಿಡಿಯಲು ಎಎನ್‌ಎಫ್ ಈಗಾಗಲೇ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದೆ.
 

SCROLL FOR NEXT