ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥ ಬಿ.ಆರ್ ನಾಯ್ಡುಗೆ ಹೊಸ ಸಂಕಷ್ಟ ಎದುರಾಗಿದೆ. ಬಿಜೆಪಿ ನಾಯಕರು ನಡೆಸಿದ ಪ್ರತಿಭಟನೆಯ ನಕಲಿ ಫೋಟೋವನ್ನು ಬಳಸಿದ ಆರೋಪದ ಮೇಲೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಇಬ್ಬರ ಮೇಲೆ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಿದೆ.
ಇನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 156 (3) ರ ಅಡಿಯಲ್ಲಿ ಪ್ರಕರಣ ದಾಖಲಿಸಿ 2024ರ ಮಾರ್ಚ್ 30ರೊಳಗೆ ವರದಿ ಸಲ್ಲಿಸಲು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಅವರಿಗೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಾಧೀಶ ಪ್ರೀತ್ ಜೆ ಅವರು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಆರೋಪಿಗಳು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇತರ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಪ್ರತಾಪ್ ಸಿಂಹ, ಸಿ.ಟಿ.ರವಿ, ಸುನೀಲ್ ಕುಮಾರ್ ಅವರ ಮುಖಗಳನ್ನು ಮಾರ್ಫ್ ಮಾಡಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾನೂನು ಘಟಕದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಘಟ್ಟ ಖಾಸಗಿ ದೂರು ದಾಖಲಿಸಿದ್ದರು. ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ, ವಿವಿಧ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಬಿಜೆಪಿ ವಿರುದ್ಧ ಅವರನ್ನು ಪ್ರಚೋದಿಸುವ ಜೊತೆಗೆ ಆ ನಾಯಕರ ವರ್ಚಸ್ಸು ಕೆಡಿಸುವ ಹುಸಿ, ಸುಳ್ಳು ಮತ್ತು ಕಪೋಲಕಲ್ಪಿತ ಫಲಕಗಳನ್ನು ಬಳಸಲಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: 'ನಾನೂ ಕರಸೇವಕ, ನಮ್ಮನ್ನೂ ಬಂಧಿಸಿ' ಅಭಿಯಾನ: ಆರ್ ಅಶೋಕ್ ಸೇರಿ ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗಿ
1992ರ ಬಾಬರಿ ಮಸೀದಿ ಧ್ವಂಸ ಚಳವಳಿಯ ಭಾಗವಾಗಿದ್ದ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿದ್ದಕ್ಕಾಗಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಬಿಜೆಪಿ ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡಿದ್ದು ಅದರಲ್ಲಿ 'ಒಬ್ಬ ಕರ ಸೇವಕ. ನನ್ನನ್ನೂ ಬಂಧಿಸಿ ಎಂದು ಬರೆಯಲಾಗಿತ್ತು. ಆದರೆ ಕಾಂಗ್ರೆಸ್‌ನ ಐಟಿ ಸೆಲ್ ಫಲಕಗಳಲ್ಲಿ ಬರೆದಿರುವ ಘೋಷಣೆಗಳನ್ನು ಬದಲಾಯಿಸಿ, ಹಗರಣಗಳು ಮತ್ತು ಇತರ ಅಕ್ರಮಗಳ ಬಗ್ಗೆ ತಪ್ಪೊಪ್ಪಿಗೆಯಂತೆ ತೋರಿಸುವ ಮತ್ತು ನಂತರ ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿತ್ತು. ಈ ಫೋಟೋಗಳನ್ನು ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.