ರಾಜ್ಯ

ವಿಧಾನಸೌಧದಲ್ಲಿ ರಾಜ್ಯಮಟ್ಟದ ಜನಸ್ಪಂದನಾ ಕಾರ್ಯಕ್ರಮ; ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಜನಸಾಗರ

Manjula VN

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಅಹವಾಲುಗಳನ್ನು ನೇರವಾಗಿ ಸ್ವೀಕರಿಸಿ, ಪರಿಹಾರ ಒದಗಿಸುವ 2ನೇ ಹಂತದ 'ಜನಸ್ಪಂದನಾ ಕಾರ್ಯಕ್ರಮ ವಿಧಾನಸೌಧದಲ್ಲಿ ಗುರುವಾರ ಆರಂಭವಾಗಿದೆ.

ಮುಖ್ಯಮಂತ್ರಿ ಇಂದು ದಿನವಿಡೀ ಜನರಿಂದ, ದೂರು, ಮನವಿಗಳನ್ನು ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ವಿಧಾನ ಸೌಧದ ಎದುರು ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.

ಬೆಳಗ್ಗೆ 10ರಿಂದ ಸಂಜೆ 6ರವರೆಗೂ ಮುಖ್ಯಮಂತ್ರಿಯವರು ಸಾರ್ವಜನಿಕರ ಅಹವಾಲು ಆಲಿಸುವರು. ಇದಕ್ಕಾಗಿ ವಿಧಾನಸೌಧದ ಆವರಣದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಮಿಯಾನ ಅಳವಡಿಸಿ ಇಲಾಖಾವಾರು ಕೌಂಟರ್ ಗಳ ಸೌಲಭ್ಯ ಕಲ್ಪಿಸಲಾಗಿದೆ. ವಿಧಾನಸೌಧದ ಒಳಭಾಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಜನರ ದೂರು ಮತ್ತು ಮನವಿಗಳನ್ನು ಸ್ವೀಕರಿಸಲು ಇಲಾಖಾವಾರು ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. 'ಜನತಾ ದರ್ಶನ'ಕ್ಕೆ ಆಗಮಿಸುವ ನಾಗರಿಕರು ಆಯಾ ಇಲಾಖೆಯ ಸಹಾಯ ಕೇಂದ್ರಕ್ಕೆ ತೆರಳಿ ಅಹವಾಲು ಸಲ್ಲಿಸಬಹುದಾಗಿದೆ.

ಸ್ವಾಗತ ಕೇಂದ್ರ ಮತ್ತು ಮುಖ್ಯಮಂತ್ರಿಯವರ ವೇದಿಕೆಗಳ ಜೊತೆಗೆ ಇಲಾಖಾವಾರು 28 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಇಲಾಖೆಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

SCROLL FOR NEXT