PVNR, ಚರಣ್ ಸಿಂಗ್, ಸ್ವಾಮಿನಾಥನ್ ಗೆ ಭಾರತ ರತ್ನ
ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಹಾಗೂ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಗೆ ಭಾರತ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ನರಸಿಂಹ ರಾವ್ ಅವರು ಭಾರತವನ್ನು ನಿರ್ಣಾಯಕ ಪರಿವರ್ತನೆಗಳ ಮೂಲಕ ಮುನ್ನಡೆಸಿ ದೇಶದ ಸಾಂಸ್ಕೃತಿಕ ಮತ್ತು ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿದರು, ಚರಣ್ ಸಿಂಗ್ ಅವರು ದೇಶಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಸವಾಲಿನ ಸಮಯದಲ್ಲಿ ಭಾರತ ಕೃಷಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುವಲ್ಲಿ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಪಾತ್ರ ಪ್ರಮುಖವಾದದ್ದು ಎಂದು ಬಣ್ಣಿಸಿದ್ದಾರೆ.
ತೆರಿಗೆ ತಾರತಮ್ಯ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ-ಸಿದ್ದರಾಮಯ್ಯ
ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ ವಿಚಾರದಲ್ಲಿ ನಾನು ಹೇಳಿದ್ದು ಸುಳ್ಳಾದರೆ ರಾಜಕೀಯವನ್ನೇ ತೊರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ದಾವಣಗೆರೆಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ವರ್ಷ ಹಿಂದೆಂದೂ ಕಾಣದ ಬರಗಾಲ ಉಂಟಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಮನವಿ ಸಲ್ಲಿಸಿ 5 ತಿಂಗಳಾಯಿತು, ಈವರೆಗೂ ಒಂದು ರೂಪಾಯಿ ಕೂಡ ಕೊಟ್ಟಿಲ್ಲ ಎಂದು ಆರೋಪಿಸಿದರು. ಕರ್ನಾಟಕದ ಬಿಜೆಪಿ ನಾಯಕರು ಸುಮ್ಮನೆ ಭಾಷಣ ಮಾಡುತ್ತಾರೆ, ನಮ್ಮ ಸರ್ಕಾರವನ್ನು ದೂರುತ್ತಾರೆ. ನಮಗೆ ಅನ್ಯಾಯ ಆದರೆ ಪ್ರತಿಭಟನೆ ಮಾಡಬಾರದೆ, ಯಡಿಯೂರಪ್ಪ ಬಾಯಿಮುಚ್ಚಿಕೊಂಡು ಕೂತಿರುತ್ತಾರೆ ಎಂದರೆ ನಾವು ಕೂಡ ಬಾಯಿ ಮುಚ್ಚಿಕೊಂಡಿರಬೇಕಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರದಲ್ಲೂ 40% ಕಮಿಷನ್ ಮುಂದುವರೆದಿದೆ ಎಂಬ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಾಗಮೋಹನ್ ದಾಸ್ ಆಯೋಗ ರಚನೆ ಮಾಡಿದ್ದೇವೆ ಅಲ್ಲಿಗೆ ದಾಖಲೆ ನೀಡಲಿ ಎಂದು ಹೇಳಿದ್ದಾರೆ. ದೇಶ ವಿಭಜನೆ ಹೇಳಿಕೆ ನೀಡುವವರನ್ನು ಕೊಲ್ಲುವ ಕಾನೂನು ತರಬೇಕು ಎನ್ನುವ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಈಶ್ವರಪ್ಪನವರಿಗೆ ಕಡಿ, ಬಡಿ, ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಈಶ್ವರಪ್ಪನ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ನನಗೆ ಆರ್‌ಎಸ್‌ಎಸ್ ಟ್ರೈನಿಂಗ್ ಆಗಿದೆ ಎನ್ನುತ್ತಾರೆ. ಇದೇನಾ ಟ್ರೈನಿಂಗ್ ಆಗಿರುವುದು ಈಶ್ವರಪ್ಪ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿ ಸಿ ಹೆಚ್ ಪ್ರತಾಪ್ ರೆಡ್ಡಿ ರಾಜೀನಾಮೆ
ಆಂತರಿಕ ಭದ್ರತೆ ವಿಭಾಗದ ಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಸಿ ಹೆಚ್ ಪ್ರತಾಪ್ ರೆಡ್ಡಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಿವೃತ್ತಿಯ ಅವಧಿಗೂ 2 ತಿಂಗಳು ಮುನ್ನವೇ ಪ್ರತಾಪ್ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ಏಪ್ರಿಲ್ 30ಕ್ಕೆ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ರೆಡ್ದಿ ಮನವಿ ಮಾಡಿದ್ದಾರೆ.
ಮೇಲಾಧಿಕಾರಿಗಳ ಕಿರುಕುಳದ ಪರಿಣಾಮ ರಾಯಚೂರು ಉಪವಿಭಾಗಾಧಿಕಾರಿ, ಕಚೇರಿಯ ಎಸ್‌ಡಿಎ ವಾಸಿಂಚೌಧರಿ ಆಸಿಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಾಸಿಂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಜಮೀನು ದಾಖಲೆಗಳ ನಿರ್ವಹಣೆ ವಿಭಾಗದಲ್ಲಿ ಡಿ ದರ್ಜೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ಯತ್ನಿಸಿದ ನೌಕರನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್
ಲವ್ ಜಿಹಾದ್ ಆರೋಪದ ಮೆಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆರೋಪದಲ್ಲಿ ಹಿಂದೂಪರ ಸಂಘಟನೆಯ 7 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ. ಅಪ್ರಾಪ್ತ ವಯಸ್ಸಿನ ಯುವತಿಯೊಂದಿಗೆ ತಿರುಗಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಜರಂಗ ದಳ ಕಾರ್ಯಕರ್ತರು ಅಪಹರಿಸಿ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಆಲ್ದೂರು ಪಟ್ಟದ ನಿವಾಸಿ, ಡ್ಯಾನ್ಸ್ ಮಾಸ್ಟರ್ ರುಮಾನ್ ಹಲ್ಲೆಗೊಳಗಾದ ಯುವಕನಾಗಿದ್ದು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಸಿ.ಡಿ.ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್ ಹಾಗೂ ಪ್ರಜ್ವಲ್ ಬಂಧನಕ್ಕೊಳಗಾಗಿದ್ದಾರೆ. ಆಲ್ದೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ವೀಕ್ಷಕರೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮೈಸೂರಿನ ಮಲೆಯೂರು ವಲಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಹುಲಿ ಸಂರಕ್ಷಣಾ ಪಡೆಯ ವಿಶೇಷ ವಾಚರ್ ರಾಜು ಅವರನ್ನು ಆನೆ ತುಳಿದು ಕೊಂದು ಹಾಕಿದೆ. ಕರ್ತವ್ಯಕ್ಕೆ ಹಾಜರಾಗಲು ಬಸ್ ಹತ್ತಲು ಕೆಬ್ಬೆಪುರ ಹಾಡಿಯಿಂದ ಮೊಳೆಯೂರಿಗೆ ನಡೆದುಕೊಂಡು ಬರುವ ವೇಳೆ ಈ ಘಟನೆ ನಡೆದಿದ್ದು ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವೀಡಿಯೋ ಸುದ್ದಿ