ರಾಜ್ಯ

ಕೊಪ್ಪಳ: ಗ್ರಾಮಸ್ಥರಿಗೆಲ್ಲಾ ಸಾಂಕ್ರಾಮಿಕ ಜ್ವರ, ಆಸ್ಪತ್ರೆ ವಾರ್ಡ್ ಆಗಿ ಬದಲಾದ ದೇವಾಲಯ!

Shilpa D

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರಬೆಂಚಿ ಗ್ರಾಮದ ಜನರು ಹೈರಾಣಾಗಿದ್ದಾರೆ. ಸಾಂಕ್ರಾಮಿಕ ಜ್ವರದಿಂದ  ತತ್ತರಿಸಿರುವ ಗ್ರಾಮಸ್ಥರಿಗೆ, ಗ್ರಾಮದ ದೇವಸ್ಥಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೈರಲ್ ಜ್ವರವು ಗ್ರಾಮವನ್ನು ಆವರಿಸಿದ ನಂತರ ನೂರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಂದು ತಿಂಗಳ ಹಿಂದೆ ಜ್ವರದ ಪ್ರಕರಣಗಳು ಪ್ರಾರಂಭವಾದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಕಳೆದ ಎರಡು ದಿನಗಳಲ್ಲಿ ಇದ್ದಕ್ಕಿದ್ದಂತೆ ಪ್ರಕರಣಗಳ ಸಂಖ್ಯೆ 100 ದಾಟಿದೆ, ಸ್ಥಳೀಯ ಆರೋಗ್ಯ ಅಧಿಕಾರಿಗಳು ಕೆಲವು ಗ್ರಾಮಸ್ಥರನ್ನು ಭೀಮಾಂಬಿಕಾ ದೇವಸ್ಥಾನಕ್ಕೆ ಸ್ಥಳಾಂತರಿಸಿದರು.

ಭೀಮಾಂಬಿಕಾ ದೇವಾಲಯ ಈಗ ಆಸ್ಪತ್ರೆಯ ರೀತಿ ಬದಲಾಗಿದೆ,  ಕೆಲವರಿಗೆ IV  ಹಾಕಲಾಗಿದೆ. ಇದು ವೈರಲ್ ಜ್ವರ ಎಂದು ಆರೋಗ್ಯ ಸಿಬ್ಬಂದಿ ಹೇಳುತ್ತಿದ್ದಂತೆ ರೋಗಿಗಳ ಕುಟುಂಬಸ್ಥರು ರೋಗಿಗಳಿಂದ ಅಂತರ ಕಾಪಾಡಿಕೊಂಡಿದ್ದಾರೆ.

ನೆರೆಬೆಂಚಿ ಗ್ರಾಮದಲ್ಲಿ ಒಟ್ಟು 1,200 ಜನಸಂಖ್ಯೆ ಇದ್ದು, ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲ. ಸುತ್ತಮುತ್ತಲಿನ ನೀರು, ಸ್ವಚ್ಛತೆ ಇಲ್ಲದೇ ಸೊಳ್ಳೆಗಳ ಕಾಟ ಹೆಚ್ಚಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ಕೊಪ್ಪಳಕ್ಕೆ ಕೆಲವು ರಕ್ತದ ಮಾದರಿಗಳನ್ನು ಕಳುಹಿಸಿದ್ದಾರೆ. ಗುರುವಾರ ಒಂದು ಚಿಕೂನ್‌ಗುನ್ಯಾ ಪ್ರಕರಣ ವರದಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆರೋಗ್ಯಾಧಿಕಾರಿಗಳು ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರೂ ಈ ರೋಗ ತಮ್ಮ ಜೀವವನ್ನೇ ಬಲಿತೆಗೆದುಕೊಳ್ಳಬಹುದು ಎಂಬ ಭಯ ಗ್ರಾಮಸ್ಥರಲ್ಲಿದೆ. ಇಡೀ ಗ್ರಾಮ ಕ್ವಾರಂಟೈನ್‌ನಲ್ಲಿದ್ದು, ಗ್ರಾಮಸ್ಥರು ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಗುರುವಾರ ಕುಷ್ಟಗಿ ತಹಶೀಲ್ದಾರ್ ರವಿ ಅಂಗಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ವಿಚಾರಿಸಿ, ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆರೋಗ್ಯ ಸಿಬ್ಬಂದಿಗೆ ತಿಳಿಸಿದರು.

ಕೊಪ್ಪಳ ಡಿಎಚ್‌ಒ ಲಿಂಗರಾಜ್ ಟಿ ಮಾತನಾಡಿ, ನಾವು ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದೇವೆ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲಿದ್ದಾರೆ. ಶೀಘ್ರದಲ್ಲೇ ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ನಾವು ಕಾಳಜಿ ವಹಿಸುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT