ರಾಜ್ಯ

ಹನುಮಧ್ವಜ ತೆರವು ವಿವಾದ: ಹಿಂದೂಪರ ಸಂಘಟನೆಗಳಿಂದ ಬಂದ್ ಗೆ ಕರೆ, ಮಂಡ್ಯ, ಕೆರಗೋಡಿನಲ್ಲಿ ಭಾಗಶಃ ಚಟುವಟಿಕೆ ಸ್ಥಗಿತ

Sumana Upadhyaya

ಮಂಡ್ಯ: ಸಕ್ಕರೆ ನಾಡು ಮಂಡ್ಯದ ಕೆರಗೋಡಿನಲ್ಲಿ ಹನುಮಧ್ವಜ ತೆರವು ಸಂಬಂಧ ವಿವಾದ ಉಂಟಾಗಿ ಹಿಂದೂಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮಂಡ್ಯ ಮತ್ತು ಕೆರೆಗೋಡು ಬಂದ್ ಭಾಗಶಃ ಯಶಸ್ವಿಯಾಗುತ್ತಿದೆ. ಮಂಡ್ಯ ಕೆರಗೋಡ ಬಂದ್​ಗೆ ಕರೆ ಹಿನ್ನೆಲೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. 

ಬಂದ್ ನಿಂದ ಜೆಡಿಎಸ್ -ಬಿಜೆಪಿ ದೂರ: ಮಂಡ್ಯ ನಗರ, ಕೆರೆಗೋಡು ಗ್ರಾಮವನ್ನು ಬಂದ್ ಮಾಡುವ ನಿಟ್ಟಿನಲ್ಲಿ ಭಜರಂಗದಳ, ವಿಹೆಚ್ ಪಿ, ಶ್ರೀರಾಮ ಭಜನಾ ಮಂಡಳಿಯಿಂದ ಇಂದು ಬಂದ್ ಗೆ ಕರೆ ನೀಡಲಾಗಿದೆ. ಕೆರಗೋಡು ಗ್ರಾಮದಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್‌ ಬೈಕ್‌ ರ್ಯಾಲಿ ನಡೆದಿದೆ. ಅನೇಕ ಕಡೆ ಅಂಗಡಿ-ಮುಂಗಟ್ಟುಗಳು ಮುಂಜಾಗ್ರತಾ ಕ್ರಮವಾಗಿ ಸ್ವಯಂಪ್ರೇರಿತವಾಗಿ ಮುಚ್ಚಿವೆ.

ಬಂದ್‌ಗೆ ಜೆಡಿಎಸ್, ಬಿಜೆಪಿ ನೇರ ಬೆಂಬಲ ನೀಡುತ್ತಿಲ್ಲ, ಬಿಜೆಪಿ ಬಾಹ್ಯ ಬೆಂಬಲ ಮಾತ್ರ ನೀಡುತ್ತಿದ್ದರೆ, ಜೆಡಿಎಸ್ ಅಂತರ ಕಾಯ್ದುಕೊಂಡಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಬಂದ್‌ಗೆ ಬಿಜೆಪಿ, ಜೆಡಿಎಸ್ ಬೆಂಬಲ ನೀಡುತ್ತಿಲ್ಲ ಎಂದು ಬಿಜೆಪಿ ಮುಖಂಡ ಜಯರಾಂ ತಿಳಿಸಿದ್ದಾರೆ.

ಕೆರಗೋಡು ಗ್ರಾಮದ ರಂಗಮಂದಿರ ಮುಂದೆ ಸ್ಥಾಪಿಸಿರುವ 108 ಅಡಿ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಬೇಕು ಎಂದು ಒತ್ತಾಯಿಸಿ ವಿಹೆಚ್ ಪಿ, ಭಜರಂಗದಳ, ಭಜರಂಗ ಸೇನೆ, ಶ್ರೀರಾಮ ಸೇನೆ ಕಾರ್ಯಕರ್ತರು ಬಂದ್ ಗೆ ಕರೆ ನೀಡಿದ್ದಾರೆ.

ಬೈಕ್ ರ್ಯಾಲಿ: ಕೆರಗೋಡು ಗ್ರಾಮದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಮೂಲಕ ಕಾರ್ಯಕರ್ತರು ನಗರಕ್ಕೆ ಆಗಮಿಸಿದ್ದಾರೆ. ನಗರದ ವೀರಾಂಜನೇಯ ದೇವಾಲಯದ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗಿದೆ.

SCROLL FOR NEXT