ರಾಜ್ಯ

ಇಂತಹ ನೂರು FIR ಗೂ ನಾನು ಹೆದರಲ್ಲ, ಪೊಲೀಸ್ ನೊಟೀಸ್ ಗೆ ಜಗ್ಗಲ್ಲ, ಉತ್ತರ ಕೊಡುತ್ತೇನೆ: ಕೆ ಎಸ್ ಈಶ್ವರಪ್ಪ

Sumana Upadhyaya

ಶಿವಮೊಗ್ಗ: ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನನ್ನ ವಿರುದ್ಧ ನೂರು ಎಫ್​ಐಆರ್​ ಹಾಕಿದರು ನಾನು ಹೆದರಲ್ಲ. ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ. ಸರ್ಕಾರ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ರಾಷ್ಟ್ರದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಮತ್ತೆ ಗುಡುಗಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂಸದ ಡಿ.ಕೆ.ಸುರೇಶ್‌ ಅವರಿಗೆ ಮೊದಲು ನೋಟಿಸ್ ಕೊಡಲಿ. ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್​​ ಗೊಂದಲ ಸೃಷ್ಟಿಸುತ್ತಿದೆ. ನಾನು ಎಲ್ಲೂ ಸಂಸದ ಡಿಕೆ ಸುರೇಶ್ ಅವರಿ​ಗೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿಲ್ಲ. ನನಗೆ ನೋಟಿಸ್ ಬಂದಿದೆ, ನಾನು ಉತ್ತರ ಕೊಡುತ್ತೇನೆ. ಪ್ರಕರಣದಲ್ಲಿ ನನಗೆ ಕ್ಲೀನ್​ಚಿಟ್ ಸಿಗುವ ವಿಶ್ವಾಸ ಇದೆ ಎಂದರು.

ಇಂತಹ ನೂರು ನೊಟೀಸ್ ಬಂದರೂ ಜಗ್ಗಲ್ಲ: ನನಗೆ ಇನ್ನೂ ನೂರು ನೋಟಿಸ್ ಕೊಡಿ, ನನ್ನ ಅಭ್ಯಂತರ ಇಲ್ಲ. ಡಿ.ಕೆ.ಸುರೇಶ್​ಗೆ ಯಾಕೆ ನೋಟಿಸ್ ನೀಡಿಲ್ಲ. ನಾನು ಡಿ.ಕೆ.ಸುರೇಶ್​ರನ್ನು ಗುಂಡುಕ್ಕಿ ಕೊಲ್ಲಿ ಎಂದಿಲ್ಲ. ನಾನು ಹೇಳಿರುವುದು ದೇಶದ್ರೋಹಿಗಳನ್ನು ಗುಂಡಿಕ್ಕಿ‌ ಕೊಲ್ಲುವ ಕಾನೂನು ತನ್ನಿ ಎಂದು. ಈ ದೇಶಕ್ಕಾಗಿ ಬಲಿದಾನ ಆದವರ ಬಗ್ಗೆ ಡಿ.ಕೆ ಸುರೇಶ್ ಅವರಿಗೆ ಗೊತ್ತಿಲ್ಲ. ನನ್ನ ಮಾತನ್ನು ತಿರುಚುವ ಪ್ರಯತ್ನ ಮಾಡಲಾಗುತ್ತಿದೆ. ನನ್ನ ಹೇಳಿಕೆಯನ್ನು ಸ್ವತಂತ್ರಕ್ಕಾಗಿ ಹೋರಾಟ ಮಾಡಿದವರು ಸ್ವಾಗತ ಮಾಡುತ್ತಾರೆ. ನೋಟೀಸ್ ಗೆ ಕಾನೂನು ಬದ್ದವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ಈ ಪ್ರಕರಣದಲ್ಲೂ ನನಗೆ ಕ್ಲೀನ್ ಚಿಟ್ ಸಿಗುತ್ತೆ ಎಂದು ಸ್ಪಷ್ಟಪಡಿಸಿದರು.

SCROLL FOR NEXT